ಶ್ರೀ ದೇವೀರಮ್ಮ ದರ್ಶನ ಪಡೆದ ಭಕ್ತರು

19 ckm 2
ಚಿಕ್ಕಮಗಳೂರು ತಾಲೂಕಿನ ಶ್ರೀ ದೇವೀರಮ್ಮ ಬೆಟ್ಟ ಏರುತ್ತಿರುವ ಭಕ್ತರು.
Published on

ಚಿಕ್ಕಮಗಳೂರು: ಬಿಡುವಿಲ್ಲದೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಾರುವ ಬಂಡೆಗಳು, ನಿನ್ನೆಯಿಂದಲೂ ಮತ್ತೆ ಮಳೆ ಆರಂಭಗೊಂಡಿದ್ದರಿಂದ ಜಾರುವಿಕೆ ಹೆಚ್ಚಾಗಿರುವ ಇಳಿಜಾರು, ದಟ್ಟ ಮಂಜುಕವಿದ ವಾತಾವರಣ. ಹೀಗೆ ಪ್ರತಿಕೂಲ ವಾತಾವರಣವನ್ನೂ ಲೆಕ್ಕಿಸದೆ 50 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವೀರಮ್ಮ ಬೆಟ್ಟವನ್ನು ಏರಿ ದೇವಿಯ ದರ್ಶನ ಪಡೆದು ಪುನೀತರಾದರು.

ಬೆಟ್ಟದ ಮೇಲಿರುವ ಶ್ರೀ ದೇವೀರಮ್ಮ ವರ್ಷಕ್ಕೊಮ್ಮೆ ಮಾತ್ರವೇ ಭಕ್ತರಿಗೆ ದರ್ಶನ ನೀಡುವುದು. ಇಷ್ಟು ವರ್ಷಗಳ ಕಾಲ ನರಕಚತುರ್ದಶಿ ಹಿಂದಿನ ರಾತ್ರಿ ಭಕ್ತರು ಬೆಟ್ಟ ಹತ್ತಿ ಶ್ರೀ ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಮಳೆ ನಿಲ್ಲದ ಕಾರಣದಿಂದಾಗಿ ಭಕ್ತರಿಗೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣದಿಂದ ಎರಡು ದಿನಗಳ ಕಾಲ ಹಗಲು ವೇಳೆ ಮಾತ್ರವೇ ಭಕ್ತರು ಬೆಟ್ಟ ಹತ್ತಿ ದೇವಿ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು.

ಅದರಂತೆ ನಕರಚರ್ತುದಶಿ ಮುನ್ನಾದಿನ ಭಾನುವಾರ ಬೆಳಗಿನ ಜಾವದಿಂದಲೇ ಭಕ್ತರು ಬೆಟ್ಟವನ್ನು ಏರಿ ಏಳು ಗಂಟೆಯಿಂದಲೇ ಶ್ರೀ ದೇವೀರಮ್ಮ ತಾಯಿಯ ದರ್ಶನ ಪಡೆದರು. ಮೊದಲ ದಿನವೇ ಬರೋಬ್ಬರಿ 55 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದಿದ್ದು ವಿಶೇಷವಾಗಿದೆ.

ಶನಿವಾರ ರಾತ್ರಿಯಿಡಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಟ್ಟ ಏರಲು ಭಕ್ತರಿಗೆ ಕಠಿಣ ಸವಾಲು ಎದುರಾಗಿತ್ತು. ಆದರೂ ಸರದಿ ಸಾಲಿನಲ್ಲಿ ತೆರಳಿದ ಸಾವಿರಾರು ಭಕ್ತರು ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯ ದರ್ಶನ ಪಡೆದು ಪುನೀತರಾದರು.

ಭಕ್ತರಿಗೆ ಬೆಟ್ಟ ಏರಲು ಅನುಕೂಲವಾಗುವಂತೆ ಹಲವಡೆ ಹಗ್ಗಗಳನ್ನು ಕಟ್ಟಲಾಗಿತ್ತಲ್ಲದೆ ಅಲ್ಲಲ್ಲಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಂತು ಸ್ನೇಹಮಯ ವಾತಾವರಣದಲ್ಲಿ ಭಕ್ತರಿಗೆ ಸಹಕಾರ ನೀಡುವ ಮೂಲಕ ಗಮನ ಸೆಳೆದರು.

ಬೆಟ್ಟವನ್ನು ಮೇಲೆ ಮೇಲೆ ಏರುತ್ತಿದ್ದಂತೆ ಹೊತ್ತು ಸರಿದು ಸೂರ್ಯ ಕಾಣಿಸಿಕೊಂಡು ಸುತ್ತಮುತ್ತಲ ರಮಣೀಯ ದೃಶ್ಯವನ್ನು ತುಸುಕಾಲ ಸವಿಯಲು ಅನುಕೂಲಕರ ವಾತಾವರಣ ಕೆಲಕಾಲ ಇತ್ತಾದರೂ ಮತ್ತೆ ಮಂಜು ಆವರಿಸಿಕೊಂಡಿತು. ಸಾಹಸಿಗಳಂತೆ ಬೆಟ್ಟವನ್ನು ಏರುತ್ತಿದ್ದ ಭಕ್ತರಿಗೆ ಅಲ್ಲಿನ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಧ್ಯವಾಗದೆ ನಿರಾಸೆ ಅನುಭವಿಸಿದರು.

ಮಂಜು ಮುಸುಕಿದ ವಾತಾವರಣ, ತಣ್ಣನೆ ಬೀಸುತ್ತಿದ್ದ ಗಾಳಿಯ ಮಧ್ಯೆ, ಇರುವೆಗಳಂತೆ ಮಹಿಳೆಯರು ಪುರುಷರು ಜೊತೆಗೂಡಿ, ಕಡಿದಾದ ಸ್ಥಳಗಳಲ್ಲಿ ಮಹಿಳೆಯರ ಕೈಹಿಡಿದು ಸಾಲು ಸಾಲಾಗಿ ಬೆಟ್ಟ ಹತ್ತಿ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.

ಒಂದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ಸಾಧ್ಯತೆ

ಪ್ರತಿ ವರ್ಷ ದೇವೀರಮ್ಮ ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಕೇವಲ ಒಂದು ದಿನ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ರಾತ್ರಿ ವೇಳೆ ಬೆಟ್ಟ ಏರುವುದನ್ನು ನಿಷೇಧಿಸಿ ಎರಡು ಹಗಲು ಬೆಟ್ಟ ಏರಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಬೆಟ್ಟ ಏರುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ ವರ್ಷ ಸರಿಸುಮಾರು 70 ಸಾವಿರ ಭಕ್ತರು ಬೆಟ್ಟ ಏರಿ ದೇವೀರಮ್ಮ ದೇವಿಯ ದರ್ಶನ ಪಡೆದಿದ್ದರು. ಆದರೆ ಈ ವರ್ಷ ಮೊದಲ ದಿನವೇ 55 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವಿಯ ದರ್ಶನ ಪಡೆದಿದ್ದಾರೆ. ಸೋಮವಾರವೂ ಬೆಟ್ಟ ಏರಲು ಅವಕಾಶ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಒಟ್ಟಾರೆ ಒಂದು ಲಕ್ಷ ಭಕ್ತರು ದೇವಿಯ ದರ್ಶನ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಒಂದು ಲಕ್ಷ ಭಕ್ತರು ಬೆಟ್ಟ ಏರಿ ದೇವಿಯ ದರ್ಶನ ಪಡೆದಿದ್ದೇ ಆದಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಲಿದೆ.

ಕೆಸರುಗುಂಡಿಯಾದ ಪಾರ್ಕಿಂಗ್‌ ಸ್ಥಳ

ದೇವಿರಮ್ಮ ದೇವಿ ದರ್ಶನಕ್ಕಾಗಿ ಬೆಟ್ಟ ಹತ್ತಲು ಬರುವ ಭಕ್ತರ ವಾಹನ ನಿಲುಗಡೆಗಾಗಿ ಮಲ್ಲೇನಹಳ್ಳಿ ಫ್ರೌಡ ಶಾಲೆ ಆವರಣದಲ್ಲಿ ಮಾಡಲಾಗಿದ್ದ ಪಾರ್ಕಿಂಗ್‌ ಸ್ಥಳ ಭಾರಿ ಮಳೆಯಿಂದಾಗಿ ಕೆಸರು ಗುಂಡಿಯಾಗಿ ಪರಿವರ್ತನೆಯಾಗಿತ್ತು. ಹೀಗಾಗಿ ವಾಹನ ಸವಾರರು ಪಾರ್ಕಿಂಗ್‌ ಮಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಮನಗಂಡ ಪೊಲೀಸ್‌ ಸಿಬ್ಬಂದಿ ಭಾನುವಾರ ಮಲ್ಲೇನಹಳ್ಳಿ ಪಾರ್ಕಿಂಗ್ ಸ್ಥಳದಲ್ಲಿ ಭಕ್ತರಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದ ದೃಷ್ಯ ಸರ್ವೇ ಸಾಮಾನ್ಯವಾಗಿತ್ತು. ಸೋಮವಾರ ಬೆಟ್ಟ ಹತ್ತಲು ಬರುವ ಭಕ್ತರು ಚಿಕ್ಕಮಗಳೂರಿನ ಎಂ.ಜಿ.ರಸ್ತೆ, ಐಡಿಎಸ್‌ಜಿ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡಿ ಬೆಟ್ಟ ಹತ್ತು ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಲ್ಲಿ ತೆರಳುವಂತೆ ಪೊಲೀಸ್‌ ಇಲಾಖೆ ಮನವಿ ಮಾಡಿದೆ.

ಪೊಲೀಸರಿಗೆ ಬಹುಪರಾಕ್‌

ಶ್ರೀ ದೇವೀರಮ್ಮ ದೇವಿ ದರ್ಶನದ ವೇಳೆ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರ ಕಾರ್ಯ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದೇವಿಯ ದರ್ಶನ ಮುಗಿಸಿ ಬೆಟ್ಟ ಇಳಿಯುತ್ತಿದ್ದ ಭಕ್ತರು ಪೊಲೀಸರನ್ನು ಹೊಗಳುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.

ಕಡಿದಾದ ಸ್ಥಳಗಳಲ್ಲಿ ರೋಪ್‌ ಅಳವಡಿಸಿ ಪೊಲೀಸರೇ ಖುದ್ದಾಗಿ ಭಕ್ತರನ್ನು ಬೆಟ್ಟ ಏರಿಸುವ ಕಾರ್ಯ ನಡೆಸುತ್ತಿದ್ದರು. ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇದ್ದರೂ ಪೊಲೀಸರ ನಿರಂತರ ಕಾರ್ಯದಿಂದಾಗಿ ಭಕ್ತರಿಗೆ ಯಾವುದೇ ಸಮಸ್ಯೆ ಎದರಾಗಲಿಲ್ಲ, ಹೀಗಾಗಿಯೇ ಈ ವರ್ಷ ಬೆಟ್ಟದಲ್ಲಿ ಯಾವೊಬ್ಬ ಭಕ್ತರೂ ಅಸ್ವಸ್ಥರಾಗದಿದ್ದುದು ವಿಶೇಷವಾಗಿತ್ತು.

ಇಂದೂ ದೇವಿ ದರ್ಶನಕ್ಕಿದೆ ಅವಕಾಶ

ಹೊರಗಿನ ಭಕ್ತಾದಿಗಳಿಗೆ ಸೋಮವಾರವೂ ಬೆಟ್ಟದ ಮೇಲಿನ ಶ್ರೀ ದೇವಿಯ ದರ್ಶನಕ್ಕೆ ಮತ್ತೊಂದು. ಅವಕಾಶವಿದೆ. ಭಾನುವಾರ ಸಂಜೆ ಸಂಜೆ ಕತ್ತಲಾದ ನಂತರ ದೊಡ್ಡ ದೀಪ ಹಚ್ಚಲಾಗುತ್ತದೆ. ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಕೆಎಸ್ಆರ್ಟಿಸಿ ಬಸ್ಸುಗಳನ್ನು ಭಕ್ತರ ಅನುಕೂಲಕ್ಕಾಗಿ ಚಿಕ್ಕಮಗಳೂರು ನಗರದಿಂದ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಸುಮಾರು 50 ಸಾವಿರ ಜನರು ದೇವಿಯ ದರ್ಶನಕ್ಕೆ ಬರಬಹುದೆಂಬ ನಿರೀಕ್ಷೆ ಇದೆ.

ಮಂಗಳವಾರ ಶ್ರೀ ಫಲಾಹಾರಸ್ವಾಮಿ ಮಠದ ವತಿಯಿಂದ ಪರಂಪರೆಯಂತೆ ಶ್ರೀ ಮಠಕ್ಕೆ ಸೇರಿದ ಹತ್ತಾರು ಹಳ್ಳಿಯ ಸ್ಥಳೀಯ ಭಕ್ತರು ಒಟ್ಟುಗೂಡಿ ದೇವಿಯ ಬೆಟ್ಟವನ್ನೇರಿ ಹಗಲಿಡಿ ಪೂಜಾ ಕೈಂಕರ್ಯವನ್ನು ನೆರವೇರಿಸಿ ಸಂಜೆ ಮರಿದೀಪ ಹಚ್ಚಿ ಹಿಂದಿರುಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net