ಶ್ರೀ ದುರ್ಗಾಪರಮೇಶ್ವರಿ ಪೂಜಾ ಮಹೋತ್ಸವ ಸಂಪನ್ನ

7ss2gangapuje mervanige
Published on


ಶನಿವಾರಸಂತೆ: ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೊಡ್ಲಿಪೇಟೆ ಹೋಬಳಿಯ ಕೋಣಿಗನಹಳ್ಳಿ ಗ್ರಾಮದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 51ನೇ ವರ್ಷದ ಪೂಜಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.


ಜಾತ್ರೋತ್ಸವ ಅಂಗವಾಗಿ ಗುರುವಾರ ಸಂಜೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವರ ಸಾನ್ನಿಧ್ಯದಲ್ಲಿ ಪೂಜೆ, ಹೋಮ ಹವನ ಮಂಗಳಾರತಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಶುಕ್ರವಾರ ಮುಂಜಾನೆ 4 ರಿಂದ ರಾತ್ರಿ 8ರವರೆಗೆ ಜಾತ್ರೋತ್ಸವ ಜರುಗಿತು.


ಮುಂಜಾನೆ 4 ಗಂಟೆಗೆ ಶ್ರಿ ದುರ್ಗಾಪರಮೇಶ್ವರಿ ತಾಯಿಯವರಿಗೆ ಗಂಗಾಪೂಜಾ ಪಯಣದ ಬಳಿಕ ಬೆಳಗ್ಗೆ 5 ಗಂಟೆಗೆ ಗಂಗಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ ಹಾಗೂ ಅರ್ಚನೆ ನೆರವೇರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಊರಿನ ಮುಖ್ಯ ಬೀದಿಗಳಲ್ಲಿ ಕೀಲು ಕುದುರೆ ಕುಣಿತ, ವೀರಗಾಸೆ ಕುಣಿತ, ನಗಾರಿ ವಾದ್ಯ ಹಾಗೂ ಕಳಸದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆೆ ದೇವಿಯ ಸಾನ್ನಿಧ್ಯದಲ್ಲಿ ಮಡ್ಲಕ್ಕಿ ಅರ್ಪಣಾ ಪೂಜಾ ಕಾರ್ಯದ ಬಳಿಕ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಸಂಜೆ 4 ಗಂಟೆಗೆ ದೇವಿಯ ಸಾನ್ನಿಧ್ಯದಲ್ಲಿ ಕೆಂಡೋತ್ಸವ ನೆರವೇರಿತು. ಸಂಜೆ 6 ಗಂಟೆಗೆ ದೇವಿಗೆ ಮಹಾಮಂಗಳಾರತಿ ಪೂಜೆ ಸಲ್ಲಿಸಿದ ಬಳಿಕ ರಾತ್ರಿ 10 ಗಂಟೆವರೆಗೆ ದೇವಸ್ಥಾನದಲ್ಲಿ ದೀಪೋತ್ಸವದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಅಕ್ಕಪಕ್ಕದ 22 ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net