

ಕಡೂರು: ಪಟ್ಟಣದ ಸುಭಾಷ್ ನಗರದ ಗ್ರಾಮದೇವತೆ ಶ್ರೀ ದುರ್ಗಾಂಬ ದೇವಿ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಶ್ರೀದೇವಿಯ ಉತ್ಸವಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಬಳಿಕ ಸಾಂಪ್ರದಾಯಿಕ ಪೂಜಾ ವಿಧಿವಿಧಾನದೊಂದಿಗೆ ಅಲಂಕತ ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದರು. ನಂತರ ದೇವಿಯ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಈ ಬಾರಿ ಹಾಲಿನ ರವಿ 47 ಸಾವಿರ ರೂಪಾಯಿಗೆ ಹರಾಜು ಕೂಗುವ ಮೂಲಕ ಬಾವುಟವನ್ನು ತಮ್ಮದಾಗಿಸಿಕೊಂಡರು. ನೂರಾರು ಭಕ್ತರು ದೇವಿಯ ರಥ ಎಳೆದು ಅರಿಶಿಣ-ಕುಂಕಮವನ್ನು ಎರಚಿ ಸಂಭ್ರಮಿಸಿದರು.
ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಗ್ರಾಮಸ್ಥರು ಗ್ರಾಮ ದೇವತೆ ದುರ್ಗಾಂಬ ದೇವಿ ರಥೋತ್ಸವವನ್ನು ಪ್ರತಿ ವರ್ಷವೂ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ದುರ್ಗಾಂಬ ದೇವಿಯ ಕಲ್ಲಿನ ದೇವಸ್ಥಾನದ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಧಾರ್ಮಿಕ ಪರಂಪರೆ ಹೊಂದಿರುವ ದೇಗುಲದಲ್ಲಿ ಸುತ್ತಮುತ್ತಲ ಭಕ್ತರ ಶ್ರದ್ಧಾಕೇಂದ್ರವಾಗಿ ಬಿಂಬಿತವಾಗಿದೆ. ಭಕ್ತರ ಅನನ್ಯ ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಕಾರ್ಯದರ್ಶಿ ಡಿಶ್ ಮಂಜುನಾಥ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ಭಕ್ತರು ಹೆಚ್ಚು ಒತ್ತು ನೀಡುತ್ತಿದ್ದು, ಭಕ್ತರ ಒಗ್ಗಟ್ಟಿನೊಂದಿಗೆ ಧಾರ್ಮಿಕ ಮಹೋತ್ಸವ ನೆರವೇರಿಸಲಾಗುತ್ತಿದೆ. ದೇಗುಲದ ನಿರ್ಮಾಣ ಹಂತ ಹಂತವಾಗಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದರು.
ಪುರಸಭಾ ಸದಸ್ಯರಾದ ಜಿ.ಸೋಮಯ್ಯ, ಗೋವಿಂದರಾಜು, ಪುಷ್ಪಲತಾ ಮಂಜುನಾಥ್, ಜ್ಯೋತಿ ಆನಂದ್, ಮರುಗುದ್ದಿ ಮನು, ಸುಬ್ಬಣ್ಣ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಎಚ್.ಆರ್.ರಂಗನಾಥ್, ಉಮೇಶ್, ಜಯಣ್ಣ, ಮನು, ಕೆ.ಕೆ.ಮಂಜು, ಕೆ.ಬಿ.ರಂಗನಾಥ್ ಇತರರಿದ್ದರು.