

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ (ವೆಂಕಟರಮಣಸ್ವಾಮಿ) ಹರಿಸೇವೆ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಸಡಗರ ಸಂಭ್ರಮದಿಂದ ಆರಂಭಗೊಂಡಿವೆ.
ಮಧ್ಯಾಹ್ನ 1 ಗಂಟೆಗೆ ಮೀಸಲು ನೀರು ತರಲಾಯಿತು, 2 ಗಂಟೆಗೆ ತಲೆಮುಡಿ, 3ಕ್ಕೆ ಮಹಾಮಂಗಳಾರತಿ, ಸಂಜೆ 6 ಕ್ಕೆ ಬಂಡಿ ಮೆರವಣಿಗೆ, ರಾತ್ರಿ 12ಕ್ಕೆ ಬಾಯಿ ಬೀಗ, 1ಕ್ಕೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ಶ್ರೀ ತೋಪಿನ ದೇವರ ಉತ್ಸವ ಮೂರ್ತಿ, ಶ್ರೀ ಲಕ್ಷ್ಮೀದೇವಿ, ಶ್ರೀ ಬಂಕದಕಟ್ಟಮ್ಮ, ಶ್ರೀ ಮದೇನಟ್ಟಮ್ಮ ದೇವರ ಮೆರವಣಿಗೆ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.
ಜು.9 ರಂದು ಭಾನುವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ದೇಗುಲದ ಆವರಣದಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿಸೇವೆಗೆ ಆಗಮಿಸುವಂತೆ ಶ್ರೀ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.