

ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮದ ಇತಿಹಾಸ ಪುರಾಣ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ (ಶ್ರೀ ವೆಂಕಟರಮಣಸ್ವಾಮಿ) ಹರಿಸೇವೆ ಉತ್ಸವವು ಜು.8 ಮತ್ತು 9 ರಂದು ಸಡಗರ ಸಂಭ್ರಮದಿಂದ ನಡೆಯಲಿದೆ.
ಸಾಮಾನ್ಯವಾಗಿ ಎಲ್ಲ ಹರಿಸೇವೆಯಲ್ಲಿ ಬಾಳೆಎಲೆ ಮತ್ತು ಇಸ್ತ್ರಿ ಎಲೆಯಲ್ಲಿ ಊಟ ಕೊಡುವುದು ಸಾಮಾನ್ಯ. ಆದರೆ ಇಲ್ಲಿ ಸಾವಿರಾರು ಭಕ್ತಾದಿಗಳಿಗೆ ದೇವರಿಗೆ ಇಷ್ಟ ಎಂಬ ಕಾರಣಕ್ಕೆ ತಾವರೆ ಎಲ್ಲೆಯಲ್ಲೇ ಊಟ ನೀಡುವುದು ವಿಶೇಷವಾಗಿದೆ.
ಜು.8 ರಂದು ಮಧ್ಯಾಹ್ನ 1 ಗಂಟೆಗೆ ಮೀಸಲು ನೀರು ತರುವುದು, 2ಕ್ಕೆ ತಲೆಮುಡಿ, 3ಕ್ಕೆ ಮಹಾಮಂಗಳಾರತಿ, ರಾತ್ರಿ 6ಕ್ಕೆ ಬಂಡಿ ಮೆರವಣಿಗೆ, 12ಕ್ಕೆ ಬಾಯಿಬೀಗ, 1ಕ್ಕೆ ಸೋಮನ ಕುಣಿತ, ಜವಳಿ ಕುಣಿತ, ಮಂಗಳವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ಶ್ರೀ ತೋಪಿನ ದೇವರ ಉತ್ಸವಮೂರ್ತಿ, ಶ್ರೀ ಲಕ್ಷ್ಮೀದೇವಿ, ಶ್ರೀ ಬಂಕದಕಟ್ಟಮ್ಮ, ಶ್ರೀ ಮದೇನಟ್ಟಮ್ಮ ದೇವರ ಮೆರವಣಿಗೆ ನಡೆಯಲಿದೆ. ಜು.9 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ದೇಗುಲದ ಆವರಣದಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಮತ್ತೊಂದು ವಿಶಿಷ್ಟವೆಂದರೆ ತೋಪಿನ ತಿಮ್ಮಪ್ಪ ದೇವರ ಹರಿಸೇವೆಗೆ ದಲಿತರಿಂದಲೇ ಪ್ರಥಮ ನೈವೇದ್ಯಕ್ಕೆ ಅವರು ಕೊಟ್ಟ ಅಕ್ಕಿಯನ್ನು ಪ್ರಸಾದವಾಗಿ ಇಡಲಾಗುತ್ತದೆ. ದೇವರಿಗೆ ದವಸ ನೀಡಲು ಸ್ಥಳೀಯ ದಲಿತ ಕುಟುಂಬಗಳಿಗೆ ಹಿಂದಿನಿಂದಲೂ ಪ್ರಥಮ ಪ್ರಾಶಸ್ತ್ಯ ನೀಡುತ್ತಾ ಬಂದಿರುವುದು ವಿಶೇಷ.
ಜು.9ರಂದು ಬೆಳಗ್ಗೆ 8ಕ್ಕೆ ಆರಂಭಗೊಳ್ಳುವ ಅನ್ನಸಂತರ್ಪಣೆ ಸಂಜೆವರೆಗೂ ನಡೆಯಲಿದೆ. ಒಂದು ಎಲೆಗೆ ಒಮ್ಮೆಗಷ್ಟೇ ಅನ್ನ ಮತ್ತು ಸಾಂಬಾರ್ ಬಡಿಸಲಾಗುತ್ತದೆ. ನೈವೇದ್ಯಕ್ಕಿಡುವ ಬೆಲ್ಲದ ಅನ್ನ ಮತ್ತು ಕುಂಬಳಕಾಯಿ ಪಲ್ಯೆ, ಭಕ್ತರಿಗೆ ಅನ್ನಸಂತರ್ಪಣೆ ಮುಗಿದ ನಂತರ ಉಳಿಯುವ ಸಾಂಬಾರನ್ನು ಹರಾಜು ಹಾಕಲಾಗುತ್ತದೆ.
ಶ್ರೀ ತೋಪಿನ ತಿಮ್ಮಪ್ಪ ದೇವರ ಹರಿಸೇವೆ ಉತ್ಸವದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ತಾವರೆ ಎಲೆಯಲ್ಲೇ ಅನ್ನಸಂತರ್ಪಣೆ ನಡೆಯುತ್ತದೆ. ಇದಕ್ಕಾಗಿ ಗ್ರಾಮದ ಸುತ್ತಮುತ್ತಲಿನ ಕೆರೆಗಳಿಂದ ತಾವರೆ ಎಲೆಗಳನ್ನು ಸಂಗ್ರಹಿಸಲಾಗುತ್ತದೆ. ಹರಿಸೇವೆಗೆ ಗ್ರಾಮದ ಪ್ರತಿ ಮನೆಯಿಂದ 10 ಸೇರು ಅಕ್ಕಿ, 2 ಸೇರು ಬೇಳೆ, ಹುಣಸೆ ಹಣ್ಣು, ಕುಂಬಳಕಾಯಿ, ಸೌದೆ, ತೆಂಗಿನಕಾಯಿ, ಬೆಲ್ಲ, ಕೈಲಾದಷ್ಟು ಹಣ, ಹರಕೆ ತೀರಿಸಲು 1 ಕಟ್ಟು ತಾವರೆ ಎಲೆ ನೀಡುವುದು ವಿಶೇಷ.
ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಊಟ ಬಡಿಸುವುದು ಸೇರಿದಂತೆ ಹಬ್ಬದ ವೇಳೆ ಗ್ರಾಮಸ್ಥರು, ಯಜಮಾನರು, ಯುವಕರು ಯಾವುದೇ ಜಾತಿ ಭೇದವಿಲ್ಲದೆ ಶ್ರದ್ಧೆಯಿಂದ ಭಾಗವಹಿಸುತ್ತಾರೆ.