

ಹಾಸನ: ಸಮ ಸಮಾಜ ನಿರ್ಮಾಣ ಉದ್ದೇಶದಿಂದ ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿ ನಡೆಸಿದ ಹೋರಾಟ ಅವಿಸ್ಮರಣೀಯ ಎಂದು ವೀರಶೈವ ಲಿಂಗಾಯ ಸಮಾಜ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್ ಅವರು ಹೇಳಿದರು.
ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣಾ ಸಮಿತಿ ವತಿಯಿಂದ ನಗರದ ಬಸವೇಶ್ವರ ದೇವಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ನಿರ್ಮಾಣದ ಮೂಲಕ ಬಸವಣ್ಣ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದರು. ಮಹಿಳಾ ಸಮಾನತೆ, ಅಸ್ಪ್ರಶ್ಯತೆ ನಿವಾರಣೆ, ಮೂಢ ನಂಬಿಕೆಗಳ ವಿರುದ್ಧ ಹೋರಾಟ ನಡೆಸಿದ ಅವರು ಜನರಲ್ಲಿ ಅರಿವು ಮೂಡಿಸಲು ವಚನ ಕ್ರಾಂತಿ ನಡೆಸಿದರು ಎಂದರು.
ಜಗತ್ತು ಸಾಕಷ್ಟು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದರೂ ಜಾತೀಯತೆ, ಮೌಢ್ಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಸಮ ಸಮಾಜ ನಿರ್ಮಾಣವಾಗಬೇಕೆಂದರೆ ಬಸವಣ್ಣ ಅವರ ಆದರ್ಶಗಳನ್ನು ಪಾಲಿಸಬೇಕೆಂದರು.
ಅದ್ದೂರಿ ಮೆರವಣಿಗೆ:
ಬಸವೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ಅರಳೇಪೇಟೆ ರಸ್ತೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಸೀಗೆನಾಡು ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಯಸಳೂರು ತೆಂಕಲಗೂಡು ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಬೆಳ್ಳಿ ಸಾರೋಟಿನಲ್ಲಿ ಅಲಂಕೃತ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಮೆರವಣಿಗೆಯಲ್ಲಿ ನಂಧಿದ್ವಜ, ಚಂಡೆ ವಾದ್ಯ, ವೀರಗಾಸೆ, ಗೊಂಬೆ ಬಳಗ, ನಾಸಿಕ್ ಡೋಲು, ಕೀಲುಕುದುರೆ, ಶ್ರೀ ಕೃಷ್ಣ ರುಕ್ಮಿಣಿ, ರಾಧೆಯರ ಕುಣಿತ ಜನರ ಗಮನ ಸೆಳೆಯಿತು.
ಸಮಾಜ ಮುಖಂಡರಾದ ಸಂಗಂ, ಹೇಮೇಶ್, ಶೋಭನ್‌ಬಾಬು, ಕಿರಣ್ ಕುಮಾರ್, ಲೋಕೇಶ್, ಹೇಮಂತ್, ರೋಹಿತ್, ವಸಂತಕುಮಾರ್, ಯು.ಎಸ್.ಬಸವರಾಜು, ದೊಡ್ಡೇಗೌಡ ಇತರರಿದ್ದರು.