

ಮೈಸೂರು: ಚಾಮುಂಡಿಬೆಟ್ಟದಲ್ಲಿ ಭಾನುವಾರ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪ್ರಮೋದಾದೇವಿ ಒಡೆಯರ್ ಅವರು ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಬಣ್ಣ ಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಮೊದಲಿಗೆ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಆಶ್ವಯುಜ ಶುಕ್ಲ ಪೂರ್ಣಿಮೆ ಉತ್ತರಭಾದ್ರ ನಕ್ಷತ್ರದಲ್ಲಿ ಬೆಳಗ್ಗೆ 7.50ರಿಂದ 8.10ರ ಒಳಗೆ ಸಲ್ಲುವ ಶುಭಮುಹೂರ್ತದಲ್ಲಿ ಮಹಾಮಂಗಳಾರತಿ ಸಲ್ಲಿಸಿದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರು ರಥವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಭಕ್ತರ ಜಯಘೋಷ, ಹರ್ಷೋದ್ಗಾರ ಮಾರ್ದನಿಸಿತು. ‘ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ’ ಎಂಬ ಘೋಷಣೆಯೊಂದಿಗೆ ಭಕ್ತರು ರಥ ಎಳೆದರು.
ಸಿಎಆರ್ ಪೊಲೀಸರು ಪರಂಪರೆಯಂತೆ ಕುಶಾಲುತೋಪು ಹಾರಿಸಿದರು. ಅರಮನೆ ಪೊಲೀಸ್ ಬ್ಯಾಂಡ್ ತಂಡದಿಂದ ಸಂಗೀತ ನಿನಾದ ಮೊಳಗಿತು. ಬಳಿಕ ರಥ ಬೀದಿಯಲ್ಲಿ ತೇರು ಹೊರಟಿತು. ಭಕ್ತರು ಹಣ್ಣು-ದವನ ಎಸೆದು ನಮಿಸಿದರು.
50 ನಿಮಿಷಗಳವರೆಗೆ ಸಾಗಿ ಬಂದ ರಥ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶದ್ವಾರ ತಲುಪುವಷ್ಟರಲ್ಲಿ ಸಮಯ 9 ಗಂಟೆ ಆಯಿತು. ಈ ವೇಳೆ ನೆರೆದಿದ್ದ ಭಕ್ತರು ರಥದ ಹಗ್ಗ ಮುಟ್ಟಿ ಪುನೀತರಾದರು. ಮತ್ತೆ ಕೆಲವರು, ರಥಕ್ಕೆ ನಮಸ್ಕರಿಸಿದರು. ರಥಕ್ಕೆ ಸಿಂಗರಿಸಿದ್ದ ಹೂವುಗಳನ್ನು ಪಡೆಯಲು ಮುಗಿಬಿದ್ದರು.
ಭಕ್ತಸಾಗರ, ನೂಕುನುಗ್ಗಲು:
ಕರೊನಾ ಕಾರಣಕ್ಕೆ ಎರಡು ವರ್ಷ ಕಳೆಗುಂದಿದ್ದ ರಥೋತ್ಸವ ಈ ಬಾರಿ ಕಳೆಗಟ್ಟಿತ್ತು. ಅದ್ದೂರಿಯಾಗಿ ನಡೆದ ರಥೋತ್ಸವ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಹೀಗಾಗಿ, ಬೆಟ್ಟಕ್ಕೆ ಬೆಳಗ್ಗೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದರು. ಬೆಟ್ಟದ ಸುತ್ತಲಿನ ಗ್ರಾಮಗಳಾದ ಆಲನಹಳ್ಳಿ, ಲಲಿತಾದ್ರಿಪುರ, ಉತ್ತನಹಳ್ಳಿ, ಹೊಸಹುಂಡಿ, ಬಂಡಿಪಾಳ್ಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಚಾಮುಂಡಿಬೆಟ್ಟದಲ್ಲಿ ಸಂಭ್ರಮ ಮೇಳೈಸಿತ್ತು.
ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಈ ನಡುವೆಯೇ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ರಥೋತ್ಸವ ಮುಗಿದರೂ ಭಕ್ತರು ದೇವಸ್ಥಾನದತ್ತ ಬರುತ್ತಿದ್ದರು. ಇದರಿಂದ, ವಾಹನ ದಟ್ಟಣೆ ಕಂಡುಬಂತು. ಅಲ್ಲದೆ, ಪಾರ್ಕಿಂಗ್ ಸ್ಥಳವೂ ಭರ್ತಿಯಾಗಿ, ವಾಹನ ನಿಲ್ಲಿಸಲು ಜನರು ಪರದಾಡಿದರು.
ಹರಕೆ ಹೊತ್ತ ಭಕ್ತರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದರು. ಯುವತಿಯರು ಹಾಗೂ ಗೃಹಿಣಿಯರು ಮೆಟ್ಟಿಲುಗಳಿಗೆ ಅರಿಶಿಣ-ಕುಂಕುಮ ಹಚ್ಚಿ, ಹೂ ಹಾಕಿ ಕೈಮುಗಿದು ಭಕ್ತಿ ಸಮರ್ಪಿಸಿದರು.
ಅಪ್ಪು ಅಭಿಮಾನ: ರಥದ ಮುಂಭಾಗ ಪುನೀತ್ ರಾಜ್‌ಕುಮಾರ್ ಚಿತ್ರವಿದ್ದ ಬಾವುಟ ಹಾರಿಸಿ ಅಭಿಮಾನಿಗಳು ಸಂಭ್ರಮಿಸಿದರು.
ನಾಳೆ ತೆಪ್ಪೋತ್ಸವ:
ರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಉತ್ಸವಗಳು ನಡೆಯಲಿವೆ. ಅ. 10ರಂದು ಅಶ್ವಾರೋಹಣ, 11ರಂದು ಬೆಳಗ್ಗೆ ವಸಂತ ಪೂಜೆ, ತೀರ್ಥಸ್ನಾನ, ಮಂಟಪೋತ್ಸವ, ಸಂಜೆ 7ಗಂಟೆಗೆ ತೆಪ್ಪೋತ್ಸವ, ಆಂದೋಳಿರೋಹಣ, ಧ್ವಜಾರೋಹಣ ಜರುಗಲಿದೆ. 12ರಂದು ಸಂಜೆ ಪಂಚೋಪಚಾರ ಪೂಜೆ, ಕೈಲಾಸ ವಾಹನೋತ್ಸವ, ಶಯನೋತ್ಸವ, 13ರಂದು ಮಹಾಭಿಷೇಕ, ಸಿಂಹವಾಹನ, ಮಂಟಪೋತ್ಸವ, 14ರಂದು ಸಂಜೆ ಮುಡಿ ಉತ್ಸವ (ಜವಾಹಿರಿ ಉತ್ಸವ), ಮಂಟಪೋತ್ಸವ ನೆರವೇರಲಿವೆ.