

ಚಂದ್ರಶೇಖರ ಎಮ್ಮೆ ಭಾಲ್ಕಿ
ಧಾಮರ್ಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರಿಗೆ ಕನರ್ಾಟಕ ಮದ್ಯಪಾನ ಸಂಯಮ ಮಂಡಳಿ ಕೊಡಮಾಡುವ ಪ್ರಸಕ್ತ ಸಾಲಿನ ಸಂಯಮ ಪ್ರಶಸ್ತಿ ಒಲಿದಿದೆ. ಇದು ಹಿರೇಮಠದ ಭಕ್ತರಲ್ಲಿ ಎಲ್ಲಿಲ್ಲದ ಹರ್ಷ ಮೂಡಿಸಿದೆ.
ಜನರಲ್ಲಿರುವ ದುಶ್ಚಟಗಳನ್ನು ಬಿಡಿಸಲು ಪಟ್ಟದ್ದೇವರು ಕೈಗೊಂಡ ಮೌನಕ್ರಾಂತಿ ಮತ್ತು ಸಾಮಾಜಿಕ ಸೇವೆ ಪರಿಗಣಿಸಿ ಮಂಡಳಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಒಂದು ಲಕ್ಷ ರೂ. ನಗದು ಮತ್ತು ಬೆಳ್ಳಿ ಪದಕ ಒಳಗೊಂಡಿದೆ. ಸೆಪ್ಟೆಂಬರ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪಟ್ಟದ್ದೇವರು ಪ್ರತಿ ಹಳ್ಳಿಯಲ್ಲಿ ದುಗರ್ುಣದ ಭಿಕ್ಷೆ, ಸನ್ಮಾರ್ಗದ ದೀಕ್ಷೆ ಅಭಿಯಾನ ನಡೆಸುತ್ತಿದ್ದಾರೆ. ಪೂಜ್ಯರ ಜೋಳಿಗೆ ಅಭಿಯಾನದಿಂದ ಹಲವರು ದುಶ್ಚಟಗಳನ್ನು ತೊರೆದಿದ್ದಾರೆ. ಮದ್ಯದ ಬಾಟಲಿ, ಬೀಡಿ, ಸಿಗರೇಟ್, ಗುಟ್ಖಾ, ತಂಬಾಕು ಚೀಟಿಗಳನ್ನು ಭಿಕ್ಷೆ ಬೇಡಿ ಜೋಳಿಗೆಗೆ ಹಾಕಿಸಿಕೊಂಡು ಜನರನ್ನು ದುಶ್ಚಟ ಮುಕ್ತರನ್ನಾಗಿಸಿದ್ದಾರೆ.
ಕನ್ನಡ ಮಠವೆಂದೇ ಖ್ಯಾತಿ ಪಡೆದ ಭಾಲ್ಕಿ ಹಿರೇಮಠಕ್ಕೆ ದೊಡ್ಡ ಇತಿಹಾಸ ಇದೆ. ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಗುರುಬಸವ ಶ್ರೀಗಳು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.
40ರ ಹರೆಯದ ಶ್ರೀಗಳು ನಡೆದು ಬಂದ ದಾರಿ ರೋಚಕ. ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಮೂಲಗೆ ಕುಟುಂಬದ ಪೂಜ್ಯರ ಪೂವರ್ಾಶ್ರಮದ ಹೆಸರು ರಾಜಕುಮಾರ. 5ನೇ ತರಗತಿವರೆಗೆ ಔರಾದ್ನಲ್ಲಿ ಅಭ್ಯಸಿಸಿದ ಅವರು 6ನೇ ತರಗತಿಗೆ ಭಾಲ್ಕಿ ಮಠದ ಶ್ರೀ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯ ಸೇರಿ ಶಿಕ್ಷಣ ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಭಕ್ತಿ, ಅಧ್ಯಾತ್ಮ, ನಿಸ್ವಾರ್ಥ ಸೇವೆ ಗುಣಗಳನ್ನು ಬೆಳೆಸಿಕೊಂಡರು. ಶಿಕ್ಷಣ ಜತೆಗೆ ಭಾಲ್ಕಿ ಮಠದ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದರು. ಇವರ ಸೇವಾ ಕಾರ್ಯ, ಅಧ್ಯಾತ್ಮ ಸೆಳೆತ ಗಮನಿಸಿ 2016ರಲ್ಲಿ ಮಠದ ಪೀಠಾಧಿಪತಿಯಾಗಿ ಮಾಡಲಾಯಿತು.
ಈ ಭಾಗದ ಯುವಕರು ಹೊಂದಿದ ದುಶ್ಚಟಗಳನ್ನು ಹೋಗಲಾಡಿಸಲು ಶ್ರೀ ಗುರುಬಸವ ಪಟ್ಟದ್ದೇವರು ಜೋಳಿಗೆ ಹಿಡಿದರು. ಪ್ರತಿ ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸಿದರು. ವಿವಿಧ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಉಜ್ವಲ ಭವಿಷ್ಯದ ಬೋಧನೆ ಮಾಡಿದರು. ಪೂಜ್ಯರ ಸೇವಾ ಕಾರ್ಯ ಗಮನಿಸಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ.
ಭಾಲ್ಕಿ ಹಿರೇಮಠದ ಸಾಮಾಜಿಕ ಸೇವೆ: ಈ ಭಾಗದಲ್ಲಿ ಹಿರೇಮಠ ಮಾಡುತ್ತಿರುವ ಸಮಾಜೋಧಾಮರ್ಿಕ ಸೇವೆ ಅನನ್ಯ. ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹಿರೇಮಠವನ್ನು ಕನ್ನಡ ಮಠ, ಜನರ ಮಠವಾಗಿ ಪರಿವತರ್ಿಸಿದರು. ಅವರ ಕರಸಂಜಾತ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವ ತತ್ವ ಮತ್ತು ಕನ್ನಡವನ್ನು ಉಸಿರಾಗಿಸಿಕೊಂಡರು. ಸದಾ ಸಮಾಜ ಸೇವೆ ತುಡಿತದೊಂದಿಗೆ ಸೇವಾ ಕಾರ್ಯವನ್ನು ವಿಸ್ತರಿಸಿದರು. ಇದೀಗ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸೇವಾ ಕಾರ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ನಾಡಿನ ಪ್ರಮುಖ ಮಠಗಳಲ್ಲಿ ಇಂದು ಹಿರೇಮಠಕ್ಕೆ ಅಗ್ರಮಾನ್ಯ ಸ್ಥಾನ, ಗೌರವವಿದೆ. ಇದರ ಹಿಂದೆ ಪಟ್ಟದ್ದೇವರ ಅಪಾರ ಶ್ರಮ, ತ್ಯಾಗ ಅಡಗಿದೆ.
ಬಸವಣ್ಣನೇ ಗುರು ಎಂದು ಅಪ್ಪಿಕೊಂಡು ಶರಣ ಸಾಹಿತ್ಯ ಪ್ರಚಾರ, ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಂತೆ ಶ್ರೀ ಗುರುಬಸವ ಪಟ್ಟದ್ದೇವರು ಮಾಡುತ್ತಿರುವ ದುಶ್ಚಟಮುಕ್ತ ಸಮಾಜದ ಕೆಲಸ ಮಾದರಿ. ಪ್ರಶಸ್ತಿ ಶ್ರೀಗಳಿಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಶಕ್ತಿ ತುಂಬಿದೆ.
| ಶಶಿಧರ ಕೋಸಂಬೆ, ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ನಿದರ್ೇಶಕ