ಶ್ರೀ ಗರ್ಗೇಶ್ವರಿಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

18tnpnewsfile02.photo01
ತಿ. ನರಸೀಪುರ ತಾಲೂಕಿನ ಶ್ರೀ ಗರ್ಗೇಶ್ವರಿ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ ಜರುಗಿತು.
Published on

ತಿ.ನರಸೀಪುರ: ಮಹಾ ಶಿವರಾತ್ರಿಯ ಪ್ರಯುಕ್ತ ತಾಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ಶ್ರೀ ಗರ್ಗೇಶ್ವರಿಸ್ವಾಮಿ ದೇವಾಲಯ, ಪಟ್ಟಣದ ಮೂಲಸ್ಥಾನೇಶ್ವರ, ಬಳ್ಳೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ಶಿವಾಲಯಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಗರ್ಗೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವರಾಂ ದೀಕ್ಷಿತ್ ಅವರು ದೇವರಿಗೆ ಬಿಲ್ಪಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು.

ಜಿಲ್ಲೆ ಮಾತ್ರವಲ್ಲದೆ ನೆರೆಹೊರೆಯ ಜಿಲ್ಲೆ ಹಾಗೂ ತಾಲೂಕುಗಳಿಂದ ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಶಿವನ ದರ್ಶನ ಪಡೆದರು. ದೇವಸ್ಥಾನದಲ್ಲಿ ರಾತ್ರಿಯಿಡಿ ವಿವಿಧ ರೀತಿಯ ಅಭಿಷೇಕಗಳು, ಭಕ್ತರಿಂದ ಭಜನಾ ಕೈಂಕರ್ಯಗಳು ನಡೆದವು.

ಬೆಳಗಿನ ವೇಳೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಇಟ್ಟು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು.

ಪಟ್ಟಣದ ಸಂತೇಮಾಳದ ಮೂಲಸ್ಥಾನೇಶ್ವರ, ತಿರಮಕೂಡಲಿನ ಅಗಸ್ತೇಶ್ವರ, ಪಟ್ಟಣದ ಬಳ್ಳೇಶ್ವರಸ್ವಾಮಿ ದೇವಾಲಯಗಳಲ್ಲಿ ಹಬ್ಬದ ವಿಶೇಷ ಪೂಜೆಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net