

ಮದ್ದೂರು: ಕೊನೆ ಅಷಾಢ ಶುಕ್ರವಾರದ ಪ್ರಯುಕ್ತ ತಾಲೂಕಿನ ಬೆಸಗರಹಳ್ಳಿ ಗ್ರಾಮದ ಶ್ರೀ ಎಲ್ಲಮ್ಮತಾಯಿ ದೇವಸ್ಥಾನದಲ್ಲಿ 9ನೇ ವರ್ಷದ ಪೂಜಾ ಮಹೋತ್ಸವ (ಪರದ) ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇಗುಲದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ದೇಗುಲದ ಆವರಣದಲ್ಲಿ 6 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಶ್ರೀ ರೇಣುಕಾ ಎಲ್ಲಮ್ಮ ತಾಯಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೆಸಗರಹಳ್ಳಿ, ಕೆರೆಮೇಗಳದೊಡ್ಡಿ, ಚುಂಚೇಗೌಡನಮಾಡ್ಡಿ, ಈರೇಗೌಡನದೊಡ್ಡಿ, ಪಣ್ಣೆದೊಡ್ಡಿ, ಮಹರ್ನಮಿದೊಡ್ಡಿ, ಹೊಂಬಾಳೆಗೌಡನದೊಡ್ಡಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರು, ಯಜಮಾನರು, ಮುಖಂಡರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು. ಶಿವಾರ ಉಮೇಶ್ ಮತ್ತು ತಂಡದವರು ನಡೆಸಿಕೊಟ್ಟ ಗೀತ ಗಾಯನ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.
ದೇಗುಲದ ಪ್ರಧಾನ ಅರ್ಚಕ ಬಿ.ಆರ್.ಸತ್ಯಪ್ಪ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವಹಿಸಿ ಮಾತನಾಡಿ, ಬೆಸಗರಹಳ್ಳಿ ಶ್ರೀ ಎಲ್ಲಮ್ಮತಾಯಿ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿರುವುದರಿಂದ ದೇವರಿಗೆ ರಾಜ್ಯದ ಎಲ್ಲೆಡೆ ಅಪಾರ ಭಕ್ತ ವೃಂದವಿದೆ ಆಷಾಢ ಶುಕ್ರವಾರದ ಅಂಗವಾಗಿ ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು ಎಂದು ತಿಳಿಸಿದರು.
ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ದೇಗುಲದಲ್ಲಿ ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಮೃತ್ಯುಂಜಯ ಹೋಮ ಮತ್ತು ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 4 ಗಂಟೆಗೆ ಪುಣ್ಯಾಹ ಕಳಶಾರಾಧನೆ ಹೂ-ಹೊಂಬಾಳೆ ತರುವುದು ಮತ್ತು ಮೀಸಲು ನೀರು ತರುವುದು ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ರಾತ್ರಿ 7.30 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಪೂಜಾ ಉತ್ಸವ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ದೇವರಿಗೆ ವಿಶೇಷ ಪೂಜೆ ಮಾಡಿ ಬರಮಾಡಿಕೊಂಡರು.