

ಔರಾದ್: ಪಟ್ಟಣದ ಆರಾಧ್ಯದೈವ ಶ್ರೀ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವವು ಒಂದು ವಾರದಿಂದ ಶ್ರದ್ಧಾ ಭಕ್ತಿಯೊಂದಿಗೆ ಸಡಗರ, ಸಂಭ್ರಮದಿಂದ ಜರುಗಿತು. ಕೊನೆಯ ದಿನ ಗುರುವಾರ ನಸುಕಿನ ಜಾವ ಅಪಾರ ಭಕ್ತರ ಮಧ್ಯೆ ರಥೋತ್ಸವ ಜರುಗುವ ಮೂಲಕ ಜಾತ್ರೆ ಅದ್ದೂರಿ ತೆರೆ ಕಂಡಿತು.
ನಸುಕಿನ ಜಾವ ಶ್ರೀ ಅಮರೇಶ್ವರ ದೇವಸ್ಥಾನದಿಂದ ಸಾಗಿದ ಥೇರು ಬಸವೇಶ್ವರ ವೃತ್ತ, ಸಾರ್ವಜನಿಕ ಆಸ್ಪತ್ರೆ ಮೂಲಕ ಬಸವನಗಲ್ಲಿಯಲ್ಲಿನ ಪೊಲೀಸ್ ಠಾಣೆ ಹತ್ತಿರ ಇರುವ ನಂದಿ ದೇವಸ್ಥಾನದ ಅಗ್ನಿಕುಂಡಕ್ಕೆ ಬಂದು ತಲುಪಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಓ ಭಲಾ, ಶಂಕರ ಭಲಾ, ಅಮರೇಶ್ವರ ಮಹರಾಜ್ ಕೀ ಜೈ ಅನ್ನುವ ಜಯಘೋಷಗಳನ್ನು ಮೊಳಗಿಸಿದರು. ದಾರಿಉದ್ದಕ್ಕೂ ಭಜನೆ, ಕೋಲಾಟ ಗಮನ ಸೆಳೆಯಿತು. ಭಕ್ತಾದಿಗಳು ಆರಾಧ್ಯ ದೇವರಿಗೆ ಪೂಜೆ ಸಲ್ಲಿಸಿ ನಮಸ್ಕರಿಸಿ ಪುನೀತರಾದರು.
ಜಾತ್ರಾ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಹಸೀಲ್ದಾರ್ ಅರುಣಕುಮಾರ ಕುಲಕಣರ್ಿ ನೇತೃತ್ವದಲ್ಲಿ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಪಟ್ಟಣದ ಯುವಕರ ತಂಡ, ದೇವಸ್ಥಾನ ಸಮಿತಿ ಸದಸ್ಯರ ನೇತೃತ್ವದ ತಂಡಗಳು ಸಹಕಾರ ನೀಡಿದವು.
ವಾರದಿಂದ ಜಾತ್ರೆ ಸುಗಮವಾಗಿ ಜರುಗಲು ಪೊಲೀಸ್ ಇಲಾಖೆಯವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಸಿಪಿಐ ರವೀಂದ್ರನಾಥ, ಪಿಎಸ್ಐಗಳಾದ ಮಂಜನಗೌಡ ಪಾಟೀಲ್, ನಂದಿನಿ, ರೇಣುಕಾ, ಸಿದ್ದಲಿಂಗ, ಶಂಕ್ರೆಪ್ಪ ಇತರರು ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.