

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ವೆಂಕಟರಮಣಸ್ವಾಮಿ ಮತ್ತು ಆದಿಶಕ್ತಿ ಕಾಳಿಕಾಂಬದೇವಿಯ 60ನೇ ವರ್ಷದ ವಾರ್ಷಿಕ ಮಹೋತ್ಸವ ಎರಡು ದಿನಗಳ ಕಾಲ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿವೆ.
ಏ.18ರಂದು ಮತ್ತು ಏ.19ರಂದು ಎರಡು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಏ.18ರ ಶುಕ್ರವಾರ ಬೆಳಗ್ಗೆ ದೇವಾಲಯದ ಆವರಣದಲ್ಲಿ ಹೋಮ-ಹವನ ಜತೆಗೆ ವೆಂಕಟರಮಣಸ್ವಾಮಿ ಮತ್ತು ಆದಿಶಕ್ತಿ ಅಮ್ಮನವರ ವಿಗ್ರಹ ಮೂರ್ತಿಗೆ ಅಭಿಷೇಕ, ಅಲಂಕಾರ, ಮಹಾಮಂಗಳರಾತಿ, ತೀರ್ಥ-ಪ್ರಸಾದ ವಿನಿಯೋಗ ನೆರವೇರಲಿದೆ.
ಶುಕ್ರವಾರ ರಾತ್ರಿ 9 ಗಂಟೆಗೆ ವೆಂಟೇಶ್ವರಸ್ವಾಮಿಯ ಪ್ರಥಮ ಪೂಜೆಯ ಬಳಿಕ ಅಡುಗೆ ಮಾಡಲು ಪ್ರಾರಂಭಿಸಿ 11 ಗಂಟೆಯ ನಂತರ ಅಮ್ಮನವರಿಗೆ ಸೋಗಲು ತುಂಬುವುದು ಇನ್ನಿತರ ಪೂಜಾ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಏ.19ರಂದು 5ರಿಂದ 7ಗಂಟೆಯವರೆಗೆ ಗ್ರಾಮದಲ್ಲಿ ದೇವಿಯ ಹೂ-ಹೊಂಬಾಳೆ ಸಮೇತ ಸಾಂಸ್ಕೃತಿಕ ಕಲಾತಂಡಗಳೊಟ್ಟಿಗೆ ಅಮ್ಮನವರ ಗಿಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೆೇರಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡು ಬಳಿಕ ದೇವಾಲಯದ ಆವರಣಕ್ಕೆ ಬರಮಾಡಿಕೊಳ್ಳಲಾಗುವುದು.
ದೇವಾಲಯದ ಆವರಣದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಬಳಿಕ ತಲೆಮುಡಿ, ಮಹಾಭಿಷೇಕ ಇನ್ನಿತರ ಪೂಜಾ ಕೈಂಕರ್ಯಗಳು ದಿನವಿಡೀ ನೆರವೇರಲಿದ್ದು, ದೇವಾಯದ ಪ್ರಧಾನ ಅರ್ಚಕ ರಾಮಣ್ಣ ನೇತೃತ್ವದಲ್ಲಿ ಪೂಜಾ ವಿಧಿವಿಧಾಗಳು ಜರುಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು, ಅವಿನಾಶ್, ಜೂನಿಯರ್ ಜಗ್ಗೇಶ್, ರವಿ, ರೀಲ್ಸ್ ಖ್ಯಾತಿಯ ಸುಮಂತಾ ಮತ್ತು ಹಾಸ್ಯ ಕಲಾವಿದರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಜತೆಗೆ ಡಾ.ಡಿ.ಯೋಗೇಶ್ ಮತ್ತು ಸಿಂಧುಗೌಡ ತಂಡದವರಿಂದ ಭಕ್ತಿ ಗೀತೆ, ಜನಪದ ಗೀತೆ ಜರುಗಲಿವೆ.
ಕನ್ನಡ ಕಲಾಯುವಕರ ಬಳಗ ಭೀಮನಕೆರೆ ಜಯಣ್ಣ ತಂಡವರಿಂದ ಕೀಲು ಕುದುರೆ ಕುಣಿತ, ಪೂಜಾಕುಣಿತ, ವಾದ್ಯ, ಬ್ಯಾಂಡ್‌ಸೆಟ್ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.