

ಹುಬ್ಬಳ್ಳಿ: ಕೋವಿಡ್ ತಡೆ ಮುಂಜಾಗ್ರತಾ ಕ್ರಮಗಳ ಪಾಲನೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಶ್ರೀರಾಮ ನವಮಿ ಉತ್ಸವವವನ್ನು ಸರಳವಾಗಿ ಆಚರಿಸಲಾಯಿತು. ಇಲ್ಲಿಯ ಬಾನಿ ಓಣಿಯ ಶ್ರೀ ರಾಮ ನವಮಿ ಉತ್ಸವ ಸಮಿತಿ ವತಿಯಿಂದ ಸೀಮಿತ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಶ್ರೀರಾಮ-ಸೀತಾ, ಲಕ್ಷ್ಮಣರ ಬೃಹತ್ ಭಾವಚಿತ್ರಕ್ಕೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ, ಲೋಕಕ್ಕೆ ಸನ್ಮಂಗಳವಾಗಲಿ ಎಂದು ಪ್ರಾರ್ಥಿಸಲಾಯಿತು. ಕಬಂಧ ಬಾಹುವನ್ನು ಚಾಚುತ್ತಿರುವ ಕೋವಿಡ್ ಮಹಾಮಾರಿಯಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಖಗವಸು ಧರಿಸಬೇಕು ಎಂದು ಸಮಿತಿ ಪರವಾಗಿ ಕೃಷ್ಣ ಗಂಡಗಾಳೇಕರ ವಿನಂತಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಪಾಲ್ಗೊಂಡ ಭಕ್ತರಿಗೆ ಸಿಹಿ ವಿತರಿಸಿ, ಕರೊನಾ ಜಾಗೃತಿ ಸಂದೇಶ ಸಾರಲಾಯಿತು. ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಿರಕೋಳ, ಸದಸ್ಯರಾದ ರಂಗಾ ಖಟಾರೆ, ಗಂಗಾಧರ ಶೆಟ್ಟರ್, ರಾಜು ಪಟ್ಟಣ, ನಾರಾಯಣ ಶಿಂಧೆ, ಇತರರು ಪಾಲ್ಗೊಂಡಿದ್ದರು. ಹಲವಾರು ಭಕ್ತರು ಕೇಸರಿ ಶಾಲು ತೊಟ್ಟು ಪಾಲ್ಗೊಂಡು ಗಮನ ಸೆಳೆದರು.