ಶ್ರಾವಣ ಸೋಮವಾರ ಅಪ್ಪನಗುಡಿಗೆ ಭಕ್ತರ ದಂಡು

2707Klb01
Published on

ಕಲಬುರಗಿ: ಪವಿತ್ರ ಶ್ರಾವಣ ಮಾಸದ ಎರಡನೇ ಸೋಮವಾರ ಹಿನ್ನೆಲೆಯಲ್ಲಿ ನಗರದ ಮಹಾದಾಸೋಹಿ ಶರಣಬಸವೇಶ್ವರ ದರುಶನ ಪಡೆದುಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಅಪ್ಪನ ಸನ್ನಿಧಾನಕ್ಕೆ ಆಗಮಿಸಿದರು. ನಸುಕಿನ ಜಾವದಲ್ಲಿಯೇ ಭಕ್ತರು ಬರಿಗಾಲಲ್ಲಿ ನಡೆದುಕೊಂಡು ಬಂದು ಶರಣರ ದರ್ಶನ ಪಡೆದುಕೊಂಡರು.
ಕರೊನಾ ಹಿನ್ನೆಲೆಯಲ್ಲಿ ಶರಣ ಗುಡಿಯ ದರ್ಶನಕ್ಕೆ ಹೊರಗಿನಿಂದಲೇ ವ್ಯವಸ್ಥೆ ಕಲ್ಪಿಸಲಾಗಿದೆ. ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಭಕ್ತರನ್ನು ಒಳಬಿಡಲಾಗುತ್ತದೆ. ಹೀಗಾಗಿ ತಡವಾಗಿ ಬಂದ ಭಕ್ತರು ಮುಖ್ಯರಸ್ತೆಯಲ್ಲಿ ಸರತಿಯಲ್ಲಿ ನಿಂತುಕೊಂಡು ದೂರದಿಂದಲೇ ತಮ್ಮ ಆರಾಧ್ಯ ದೇವನ ದರ್ಶನ ಪಡೆದುಕೊಂಡು ನಮಿನಿಸಿದರು.
ಪ್ರವೇಶ ಬಾಗಿಲಿನ ಬಳಿಯೇ ಹೂವು-ಕಾಯಿ ಅರ್ಪಿಸಿದರು. ತೆಂಗಿನಕಾಯಿ ಒಡೆದು ಕರ್ಪುರ, ಧೂಪ ಬೆಳಗಿದರು. ಇನ್ನೂ ಕೆಲವು ಹಳ್ಳಿಗಳಿಂದ ಭಕ್ತರು ಸಹ ಪಾದಯಾತ್ರೆ ಮೂಲಕ ಶರಣರ ಸಂಸ್ಥಾನಕ್ಕೆ ಆಗಮಿಸಿ ನಮಿಸಿ ತೆರಳುತ್ತಿದ್ದ ದೃಶ್ಯಗಳು ಕಾಣುತ್ತಿದ್ದವು. ಅಲ್ಲದೆ ಹರಕೆ ಹೊತ್ತುಕೊಂಡವರು ಧೀರ್ಘ ದಂಡ ನಮಸ್ಕಾರ ಹಾಕಿ ಹರಕೆ ದೇವರಿಗೆ ಅರ್ಪಿಸಿದರು.
ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಅಪ್ಪನ ಗುಡಿಗೆ ಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬೀಗಿ ಬಂದೋಬಸ್ತ್ ಮಾಡಿದ್ದರು. ಆನ್ಲೈನ್ ಮೂಲಕ ಶ್ರಾವಣ ಶ್ರವಣ ಕಾರ್ಯಕ್ರಮಗಳಾದ ಪುರಾಣ, ಪ್ರವಚನ ಮೊದಲಾದ ಧಾರ್ಮಿಕ ಚಿಂತನ ಗೋಷ್ಠಿಗಳು ನಡೆದುಕೊಂಡು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net