ಶ್ರಾವಣ ಮಾಸ ಅತ್ಯಂತ ಪವಿತ್ರ

25BK1
ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ಸಂಸ್ಥಾನ ಗವಿಮಠದಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಡಾ.ಯುವರಾಜ ಬಿರಾದಾರ ಉದ್ಘಾಟಿಸಿದರು. ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಎ.ಜಿ.ಪಾಟೀಲ, ಡಾ.ರುದ್ರಮಣಿ ಮಠಪತಿ, ಸಿದ್ಧಾರ್ಥ ಭಾವಿದೊಡ್ಡಿ ಇದ್ದರು.
Published on

ಬಸವಕಲ್ಯಾಣ: ಪುರಾಣ, ಪ್ರವಚನಗಳ ಮೂಲಕ ಸದ್ವಿಚಾರಗಳನ್ನು ಕೇಳುವ ಶ್ರಾವಣ ಮಾಸ ಹನ್ನೆರಡು ಮಾಸಗಳಲ್ಲಿ ಶ್ರೇಷ್ಠ ಮತ್ತು ಪವಿತ್ರ ಎಂದು ಸಂಸ್ಥಾನ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರಾವಣ ಮಾಸದ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಟ್ರಸ್ಟ್ನಿಂದ ಗುರುವಾರ ಸಂಜೆ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಗದ ಆದಿ ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವಾದಿ ಶಿವಶರಣರು ಮಾಡಿರರುವ ಬೋಧನೆಯನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಬೇಕಿದೆ ಎಂದರು.

ಶ್ರಾವಣ ಎಂದರೆ ಕೇಳುವುದು ಎಂದರ್ಥ. ಒಳ್ಳೆಯ ವಿಚಾರಗಳನ್ನು ಕೇಳುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಶ್ರಾವಣ ಮಾಸದ ನಿಮಿತ್ತ ಗವಿಮಠದಲ್ಲಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸದ್ಭಕ್ತರು ಭಾಗವಹಿಸಬೇಕು ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿ ಸನ್ಮಾನ ಸ್ವೀಕರಿಸಿದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾದಿಕಾರಿ ಡಾ.ಯುವರಾಜ ಬಿರಾದಾರ ಮಾತನಾಡಿ, ಗವಿಮಠದ ಪೂಜ್ಯರು ಮಠದ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವ ಜತೆಗೆ ಜನಪರ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರ ಸಹಕಾರದಿಂದ ಮಠದ ಪರಿಸರದಲ್ಲಿ ಅಭಿವೃದ್ದಿ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಮಾತನಾಡಿ, ಗವಿಮಠದ ಶ್ರೀಗಳ ಸಮಾಜಮುಖಿ ಕಾರ್ಯ, ಕನ್ನಡಪರ ಕಾಳಜಿ ಶ್ಲಾಘನೀಯ. ಕನ್ನಡದ ಕಾರ್ಯಕ್ಕೆ ಸದಾ ಪ್ರೋತ್ಸಾಹಿಸುತ್ತಾರೆ ಎಂದರು.

ಪಂಚಾಯತ್ ರಾಜ್ ಕಾಲೇಜಿನ ಅಧ್ಯಕ್ಷ ಸಿದ್ಧಾರ್ಥ ಭಾವಿದೊಡ್ಡಿ ಮಾತನಾಡಿದರು. ಬಸವೇಶ್ವರ ಬೆರಳಚ್ಚು ಸಂಸ್ಥೆಯ ಪ್ರಾಚಾರ್ಯ ಎ.ಜಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ ಸ್ವಾಗತಿಸಿದರು. ರುದ್ರೇರ್ಶವರ ಗೋರ್ಟಾ ನಿರೂಪಣೆ ಮಾಡಿದರು. ಶಂಕುಂತಲಾ ಮಠ ಪ್ರಾರ್ಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net