

ಹಾಸನ: ಶ್ರವಣ ದೋಷವುಳ್ಳ ಮಕ್ಕಳನ್ನು ಕಡೆಗಣಿಸದೆ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿ ಸಮಾಜದ ಮುಖ್ಯವಾಹಿನಿಗೆ ತರಲು ಪೋಷಕರು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸಲಹೆ ನೀಡಿದರು.
ನಗರದ ಹಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಅನನ್ಯ ಟ್ರಸ್ಟ್ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಶ್ರವಣ ಸಾರ್ಥಕತೆ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶ್ರವಣ ದೋಷದ ಕುರಿತು ಅರಿವಿನ ಕಾರ್ಯಕ್ರಮ ಹೆಚ್ಚಾಗಬೇಕು. ಗ್ರಾಮೀಣ ಭಾಗದ ಜನರಿಗೆ ಶ್ರವಣ ದೋಷವುಳ್ಳವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು ಲಭ್ಯವಿವೆ ಎಂಬ ಮಾಹಿತಿ ತಲುಪಿಸಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ನಿರಂಜನ್ ಭಟ್ ಅವರು, ತಾವು ಇಂದು ಮಾತನಾಡುತ್ತಿರುವುದಕ್ಕೆ ಅಮ್ಮನ ಶ್ರಮ ಕಾರಣ. ಶಾಲೆಯ ನಾಟಕದಲ್ಲಿ ಅಭಿನಯಿಸಲು ನನಗೆ ಮೂಗನ ಪಾತ್ರ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಸಂಭಾಷಣೆ ಇರುವ ಪಾತ್ರ ಕೇಳುತ್ತಿದ್ದೆ. ವಿವಿಧ ವಿಧಾನಗಳಿಂದ ಮಾತನಾಡಲು ಕಲಿತೆ. ಶ್ರವಣ ದೋಷ ಉಳ್ಳ ಮಕ್ಕಳಿಗೆ ಸಹಜವಾಗೇ ಮಾತು ಬರುವುದಿಲ್ಲ. ಆದರೆ ಮಾತನಾಡುವುದನ್ನು ಕಲಿಯಲು ಹಲವಾರು ವಿಧಾನಗಳಿವೆ ಎಂದು ತಿಳಿಸಿದರು.
ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಶ್ರವಣದೋಷವುಳ್ಳ ಮಕ್ಕಳನ್ನು ತಂದೆ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಹೆತ್ತಕರುಳು ಒಪ್ಪಿ ಅಪ್ಪಿಕೊಂಡು ಬಿಡುತ್ತದೆ. ಸಮಾಜದಲ್ಲಿ ಯಾವುದೇ ಶ್ರವಣದೋಷವುಳ್ಳ ವ್ಯಕ್ತಿ ತನಗೆ ಅಂಗ ವೈಫಲ್ಯವಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಣ್ಣು, ಕಿವಿ, ಬಾಯಿ ಎಲ್ಲ ಚೆನ್ನಾಗಿದ್ದವರೇ ಆತ್ಮಹತ್ಯೆ ಮಾಡಿಕೊಂಡಿರುವುದು ಹೆಚ್ಚು. ಹಾಗಾಗಿ ಆತ್ಮಸ್ಥೈರ್ಯ ಮುಖ್ಯ ಎಂದರು.
ದೀಪಾ ಆರ್. ಭಟ್ ಮಾತನಾಡಿ, ಮಕ್ಕಳ ಶ್ರವಣನ್ಯೂನತೆಯನ್ನು ತಂದೆ-ತಾಯಿ ಯಾವ ರೀತಿ ಸ್ವೀಕರಿಸಬೇಕು. ಹೇಗೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಬೆಳೆಸಬೇಕು ಎಂಬ ಕುರಿತು ತಮ್ಮ ಸ್ವ ಅನುಭವದ ಮಾತುಗಳನ್ನು ಹೇಳಿದರು.
ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಎನ್. ಶಿವಸ್ವಾಮಿ, ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ವಿ.ಆರ್. ಕೃಷ್ಣ ಮೂರ್ತಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಕೆ. ಹರೀಶ್, ಡಾ. ಕೆ.ಯು. ರಾಘವೇಂದ್ರ ಪ್ರಸಾದ್, ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಮತ್ತಿತರರು ಹಾಜರಿದ್ದರು.