

ಚನ್ನರಾಯಪಟ್ಟಣ: ತಾಲೂಕಿನ ಎಂ.ಕೆ.ಹೊಸೂರು ಗ್ರಾಮದ ಹೆಬ್ಬಾಗಿಲ ಬಳಿಯಿರುವ ತೆರೆದ ಬಾವಿಯಲ್ಲಿ ತುಂಬಿಕೊಂಡಿದ್ದ ಕಸ, ಕಡ್ಡಿ ಹಾಗೂ ತ್ಯಾಜ್ಯವನ್ನು ಯುವಕರು ಒಗ್ಗೂಡಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಸುಮಾರು 75ರಿಂದ 80 ವರ್ಷಗಳ ಹಿಂದೆ ಗ್ರಾಮದ ಕುಡಿಯುವ ನೀರಿನ ಸಲುವಾಗಿ ಪೂರ್ವಿಕರು ಊರಿನವರಿಂದ ಹಣ ಸಂಗ್ರಹಿಸಿ ಈ ತೆರೆದ ಕಟ್ಟಡದ ಬಾವಿಯನ್ನು ನಿರ್ಮಿಸಿದ್ದು ಶುಚಿ ಹಾಗೂ ರುಚಿಯಾದ ನೀರು ಲಭ್ಯವಾಗಿತ್ತು. ಕಳೆದ 15-20 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದ ಪರಿಣಾಮ ಅಂತರ್ಜಲ ಕುಸಿತದಿಂದ ನೀರಿಲ್ಲದೆ ಈ ಬಾವಿಯು ಬತ್ತಿ ಬರಿದಾಗಿತ್ತು.
ಕುಡಿಯುವ ನೀರಿಗಾಗಿ ಈ ಬಾವಿಯನ್ನೇ ಆಶ್ರಯಿಸಿದ್ದ ಊರಿನ ಜನತೆ ಬಾವಿ ಬತ್ತಿ ಬರಿದಾದ ನಂತರ ಕೊಳವೆ ಬಾವಿಗಳತ್ತ ಮುಖ ಮಾಡಿದರು. ದಿನ ಕಳೆದಂತೆ ಬಾವಿ ಪಾಳು ಬಿದ್ದು ಗಿಡ-ಗಂಟಿಗಳು ಬೆಳೆಯುವುದರ ಜತೆಗೆ ಕಸ, ಕಡ್ಡಿ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯದಿಂದ ತುಂಬಿಕೊಂಡಿತು. ಕಳೆದ ವರ್ಷ ಹಾಗೂ ಈ ಬಾರಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಸುರಿದು ಕೆರೆ-ಕಟ್ಟೆಗಳು ತುಂಬಿಕೊಂಡಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದ ತೋಟದ ಸಾಲಿನಲ್ಲಿ ನೀರು ಜಿನುಗುತ್ತಿದೆ. ಜತೆಗೆ ಪಾಳು ಬಿದ್ದಿದ್ದ ತೆರೆದ ಬಾವಿಗಳಲ್ಲಿ ನೀರು ಜಿನುಗುವುದರೊಂದಿಗೆ ಶೇ.35 ರಿಂದ ಶೇ.45ರಷ್ಟು ಭಾಗ ನೀರು ತುಂಬಿಕೊಂಡಿದೆ.
ಇದರನ್ನು ಮನಗಂಡ ಯುವಕರು ಹಾಗೂ ಗ್ರಾಮದ ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ನಾಗರಾಜು ಅವರ ನೇತೃತ್ವದಲ್ಲಿ ಬುಧವಾರ ದೊಡ್ಡ ಜಾವಣಿಗೆ ಹಾಗೂ ಹಗ್ಗದ ಸಹಾಯದಿಂದ ಮಂಕರಿ ಕಟ್ಟಿ ಬಾವಿಯೊಳಗೆ ಬಿಟ್ಟು ಕಸ, ಕಡ್ಡಿ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಹೊರ ತೆಗೆದು ಸ್ವಚ್ಛಗೊಳಿಸಲಾಗಿದೆ.