

ಬಾಗಲಕೋಟೆ: ತಮ್ಮ ಗುರು ರೇವಣಸಿದ್ದೇಶ್ವರರು ಕೈಗೊಳ್ಳುತ್ತಿದ್ದ ಕಾರ್ಯಗಳನ್ನೇ ಮುಂದುವರಿಸಿ ವಚನ ರಚಿಸುತ್ತ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬ ಶ್ರಮಜೀವಿಯಾಗಿದ್ದರು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಯೋಗಿಯಾಗಿದ್ದ ಶರಣರು ಮೇಲು, ಕೀಳು, ಜಾತಿಬೇಧ ರಹಿತವಾಗಿ ಸುಂದರ ಸಮಾಜ ನಿರ್ಮಿಸುವ ಕನಸು ಕಂಡವರು ಎಂದರು.
ಶರಣರು, ಮಹಾತ್ಮರು, ಕವಿಗಳು, ದಾಸರು ಯಾವ ಧರ್ಮಕ್ಕೂ ಸೀಮಿತರಲ್ಲ. ಇಂತಹ ಮಹಾತ್ಮರ ತತ್ವಾದರ್ಶಗಳನ್ನು, ತಂದೆ ತಾಯಿಯರನ್ನು ಕಡೆಗಣಿಸುತ್ತಿರುವ ಇಂದಿನ ಯುವ ಪೀಳಿಗೆಗೆ ಇಂಥವರ ಸ್ಮರಣೆ ಇರಲಿ ಎಂಬ ಉದ್ದೇಶದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿ, ಸಿರಿ ಸಂಪತ್ತು, ಅಧಿಕಾರ, ಅಂತಸ್ಥಿನಿಂದ ನೆಮ್ಮದಿ ಸಾಧ್ಯವಿಲ್ಲ ಎಂಬುದನ್ನು ೧೨ನೇ ಶತಮಾನದ ಶರಣರು ತಿಳಿದಿದ್ದರು. ಲೋಕ ಕಲ್ಯಾಣಕ್ಕಾಗಿ ವಚನ ರಚಿಸಿ ಉತ್ತಮ ಸಮಾಜದ ದಾರಿದೀಪವಾದರು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಗಜೇಂದ್ರಗಡದ ಪ್ರೊ.ಎಚ್.ಎಸ್.ಕರಿದುರಗಣ್ಣವರ ಮಾತನಾಡಿ, ೧೨ನೇ ಶತಮಾನದ ಶರಣರಲ್ಲಿ ಮುಖ್ಯವಾಹಿನಿಯಲ್ಲಿದ್ದ ಸಿದ್ದರಾಮೇಶ್ವರರು ಸ್ವತಃ ಮಲ್ಲಿಕಾರ್ಜುನನನ್ನು ಕಂಡವರು. ಗುರುಗಳಾದ ರೇವಣಸಿದ್ದೇಶ್ವರ ಶ್ರೀಗಳ ಆಶಯದಂತೆ ಕೆರೆ ಕಟ್ಟುವ ಕಾರ್ಯ ಮಾಡುತ್ತಾ ೬೬ ಸಾವಿರ ವಚನಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದರು.
ಸಮಾಜದ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಸಿದ್ದರಾಮೇಶ್ವರರ ಅನುಯಾಯಿಗಳಾದ ನಾವು ಶ್ರಮಜೀವಿಗಳಾಗಿದ್ದು, ನಾಡಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಶಿಕ್ಷಣದಿಂದ ವಂಚಿತರಾದ ನಾವು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. ನಮ್ಮ ಜನ ವೆಸನಿಗಳಾಗಬಾರದು. ನಮ್ಮಂತೆ ನಮ್ಮ ಮಕ್ಕಳು ಕಷ್ಟ ಪಡಬಾರದು ಎನ್ನುವ ಉದ್ದೇಶ ವಿದ್ದರೆ ಕೂಡಲೆ ನಿಮ್ಮ ದುರಭ್ಯಾಸಗಳನ್ನು ಬಿಡಬೇಕು. ಸರ್ಕಾರದ ಕಾರ್ಯಕ್ರಮದ ಸದುಪಯೋಗ ಪಡೆದು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಬಲರಾಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.