

ಬಸವಕಲ್ಯಾಣ: ಸಮಯ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಶರಣಬಸಪ್ಪ ದಂಡೆ ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆ ಮತ್ತು ಸೌಲಭ್ಯ ಬಳಸಿಕೊಂದು ಉತ್ತಮ ಭವಿಷ್ಯ ರೂಪಿಗೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ದೊಡ್ಡಪ್ಪ ಅಪ್ಪ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ರಾಚಯ್ಯ ಮಠಪತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ನಿರ್ಭಯವಾಗಿ ಪರೀಕ್ಷೆಯನ್ನು ಬರೆಯುವ ಮೂಲಕ ಉತ್ತಮ ಸಾಧನೆ ಮಾಡಬೇಕು. ಸ್ಥಿತ್ಯಂತರಕ್ಕೆ ಅನುಗುಣವಾಗಿ ಸ್ಪಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಿತೀನ ನೀಲಕಂಠೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಶಿಕ್ಷಕರಾದ ಮಾಯಾದೇವಿ, ಭಾಗ್ಯಶ್ರೀ, ಪುಟ್ಟಿ, ಅನಿತಾಬಾಯಿ ರಾಠೋಡ್, ಸಿದ್ದಲಿಂಗ, ಪುಂಡಲೀಕ, ಐಶ್ವರ್ಯ ಇತರರಿದ್ದರು. ವಸತಿ ಶಾಲೆಯ ನಿಲಯಪಾಲಕಿ ಕುಮಾರಿ ಅರ್ಚನಾ ಚಂದುಕರ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕ ಸಾಧಕ ಅಲಿ ಸ್ವಾಗತಿಸಿದರು. ರಾಘವೇಂದ್ರ ಹಣಕುಣಿ ನಿರೂಪಣೆ ಮಾಡಿದರು.
ವಿದ್ಯಾರ್ಥಿನಿಯರಿಂದ ಜರುಗಿದ ನೃತ್ಯ, ರೂಪಕ, ಭಾಷಣ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ಗಮನ ಸೆಳೆದವು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ಅನಿಸಿಕೆ ವ್ಯಕ್ತಪಡಿಸಿದರು.