

ಬಳ್ಳಾರಿ : ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿ ಭವಿಷ್ಯದ ದಾರಿಯನ್ನು ಕಂಡುಕೊಳ್ಳಬೇಕೆಂದು ಎಸ್‌ಎಸ್‌ಎ ಕಾಲೇಜು ಪ್ರಾಚಾರ್ಯ ಡಾ.ಮೋನಿಕಾ ರಂಜನ್ ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಯುವ ಸಮುದಾಯ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. ಸಾಧನೆಗೆ ಸತತ ಅಧ್ಯಯನ, ಪರಿಶ್ರಮ,ಗುರಿ ಮುಖ್ಯ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಸಾಹಿತ್ಯ ,ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚೆಚ್ಚು ಓದಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದರು. ವಿದ್ಯಾರ್ಥಿಗಳು ಕ್ರಿಯಾಶೀಲ ಮನಸ್ಸು, ವಿಶಾಲ ಮನೋಭಾವ, ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಮುಖರಾದ ಅಧ್ಯಾಪಕರಾದ ಡಾ.ಚನ್ನಬಸವಯ್ಯ, ಡಾ.ಚೂಡಾಮಣಿ, ಡಾ.ನಾಜಿಯಾ ಖಾಜಿ , ಕೆ ಬಸಪ್ಪ, ರಾಮಸ್ವಾಮಿ , ಪ್ರವೀಣ್ ಕುಮಾರ, ಲಿಂಗಪ್ಪ , ಗುರುರಾಜ ,ರುದ್ರಮುನಿ, ರಮೇಶ ಇದ್ದರು.