ತರೀಕೆರೆ: ಪ್ರೌಢಶಾಲಾ ಮಟ್ಟದಿಂದಲೇ ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಉನ್ನತ ರ‌್ಯಾಂಕ್ ಪಡೆಯುವ ಗುರಿ ಹೊಂದಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಸುಲಭ ಎಂದು ಅರುಣೋದಯ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಜಿ.ಎಚ್.ಹರ್ಷ ಹೇಳಿದರು.
5ನೇ ಸಾಲಿನ ಸಿಇಟಿ ಹಾಗೂ ನೀಟ್‌ಗಳಲ್ಲಿ ತರೀಕೆರೆ ತಾಲೂಕಿನಲ್ಲಿಯೇ ಅತ್ಯುನ್ನತ ರ‌್ಯಾಂಕ್ ಗಳಿಸಿದ 6 ವಿದ್ಯಾರ್ಥಿಗಳಿಗೆ ಅರುಣೋದಯ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಡಾ. ಅಬ್ದುಲ್ ರಹೀಮ್ ಖಾಜಿ ಸ್ಮರಣಾರ್ಥ ನೀಡುವ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಶಾಲೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಮೂರು ವರ್ಷಗಳಿಂದ ಸಿಇಟಿ, ನೀಟ್ ೌಂಡೇಶನ್ ತರಬೇತಿ ನೀಡುತ್ತಿದೆ. ಸಾಧನೆಯ ಹಾದಿಯಲ್ಲಿರುವ ಎಲ್ಲ ಮಕ್ಕಳೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ಈ ಮೂಲಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು.
ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ರ‌್ಯಾಂಕ್ ಗಳಿಸಿದ ಪ್ರತಿ ವಿದ್ಯಾರ್ಥಿಗೆ ಅಮೆರಿಕ ನಿವಾಸಿಗಳಾದ ಡಾ. ಮತೀನ್ ಖಾಜಿ ಹಾಗೂ ಡಾ. ಮುಖೀತ್ ಖಾಜಿ ಸಹೋದರರು ಅವರ ತಂದೆ ಡಾ. ಅಬ್ದುಲ್ ರಹೀಮ್ ಖಾಜಿ ಸ್ಮರಣಾರ್ಥ ತಲಾ ಹತ್ತು ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಅರುಣೋದಯ ವಿದ್ಯಾ ಸಂಸ್ಥೆ ಮೂಲಕ ನೀಡುತ್ತಿದ್ದಾರೆ. ಸಾಧನೆ ಮೂಲಕ ಪ್ರೋತ್ಸಾಹ ಧನ ಪಡೆಯುತ್ತಿರುವ 6 ವಿದ್ಯಾರ್ಥಿಗಳ ಪೈಕಿ ನಾಲ್ವರು ಅರುಣೋದಯ ವಿದ್ಯಾ ಸಂಸ್ಥೆಯಲ್ಲಿ ಕಲಿತವರು ಎಂಬುದೇ ಹೆಮ್ಮೆಯ ಸಂಗತಿ ಎಂದರು.
ಸಿಇಟಿ, ನೀಟ್‌ನ ವಿವಿಧ ವಿಭಾಗಗಳಲ್ಲಿ ರ‌್ಯಾಂಕ್ ಗಳಿಸಿ ಖಾಸಗಿ ಕಾಲೇಜುಗಳಲ್ಲಿ ಉಚಿತ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ಪಿ.ಆ ಯುಷ್ ಅರ್ಜುನ್, ಬಿಂದು ನವಲೆ, ಟಿ.ಕೆ.ಕಾರ್ತಿಕ್, ಎ.ಕೆ.ಹಿತೈಷ್, ಟಿ.ವಿ.ಶಶಾಂಕ್, ಟಿ.ಆರ್.ಪ್ರತೀಕ್‌ಗೆ ಅವರಿಗೆ ವಿದ್ಯಾರ್ಥಿ ವೇತನ ವಿತರಿಸಿ ಪುರಸ್ಕರಿಸಲಾಯಿತು. ಅರುಣೋದಯ ವಿದ್ಯಾಸಂಸ್ಥೆ ಟ್ರಸ್ಟಿ ಗೀತಾ, ಮುಖ್ಯಶಿಕ್ಷಕಿ ಗೌರಮ್ಮ, ಶಿಕ್ಷಕಿ ಶಿಲ್ಪಾ ಇತರರಿದ್ದರು.