ಶ್ರದ್ಧೆ, ಭಕ್ತಿಯ ದತ್ತ ಪಲ್ಲಕ್ಕಿ ಮೆರವಣಿಗೆ

Datta Pallakki Meravanige Anand Ashram Khanapur Photo-2
Published on

ಬೀದರ್: ದತ್ತ ಜಯಂತಿ ಮಹೋತ್ಸವ ಅಂಗವಾಗಿ ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಶ್ರದ್ಧೆ, ಭಕ್ತಿಯ ಮಧ್ಯೆ ದತ್ತ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಮಲ್ಲಣ್ಣ ದೇವಸ್ಥಾನದಿಂದ ಆರಂಭಗೊಂಡ ದತ್ತ ದೇವರ ಭಾವಚಿತ್ರ ಇರಿಸಿದ್ದ ಹೂವಿನಿಂದ ಅಲಂಕೃತ ಪಲ್ಲಕ್ಕಿ ಮೆರವಣಿಗೆಯು ಆನಂದ ಆಶ್ರಮಕ್ಕೆ ತಲುಪಿ ಸಮಾರೋಪಗೊಂಡಿತು.
ಕುಂಭ ಕಳಶ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ, ಕೋಲಾಟ ಮೆರವಣಿಗೆಗೆ ಮೆರುಗು ತಂದುಕೊಟ್ಟವು.
ಆನಂದ ಆಶ್ರಮದ ಜಗದೀಶ್ವರಿ ಮಾತೆ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಮಳಚಾಪುರದ ಸಿದ್ಧಾರೂಢ ಮಠದ ಸದ್ರೂಪಾನಂದ ಸ್ವಾಮೀಜಿ, ರಾಜೇಂದ್ರ ಮಹಾರಾಜ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್, ಯುವ ಮುಖಂಡ ಪಪ್ಪು ಪಾಟೀಲ ಖಾನಾಪುರ, ವಿನೋದ ಮಲ್ಕಾಪುರೆ, ಅನಿಲ್ ಪೋಲಾ, ರಮೇಶ ಪಾಟೀಲ, ಪ್ರೇಮಸಾಗರ ಪಾಟೀಲ, ಮಲ್ಲಿಕಾರ್ಜುನ ಕೋಟೆ, ದಿಲೀಪಕುಮಾರ, ಭದ್ರೇಶ ಸ್ವಾಮಿ, ಶರಣಪ್ಪ ಮಹಾರಾಜ, ನರಸಿಂಹ ರೆಡ್ಡಿ, ರಮೇಶ ಠಾಕೂರ್, ಸಂಗಮೇಶ, ಅರವಿಂದ, ಶಿವಪುತ್ರ, ಎಂಜಿನಿಯರ್ ರಾಜಕುಮಾರ, ಪುಷ್ಪಕ್ ಜಾಧವ್, ಪ್ರಶಾಂತ, ನಾಗೇಶ ಪಾಟೀಲ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.
ಆನಂದ ಆಶ್ರಮದಲ್ಲಿ ಜರುಗಿದ ವಿಶೇಷ ಪೂಜೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ದತ್ತ ಜಯಂತಿ ಮಹೋತ್ಸವ ಪ್ರಯುಕ್ತ ಆಶ್ರಮದಲ್ಲಿ ಏಳು ದಿನಗಳ ಕಾಲ ಯಜ್ಞ, ಭಾಗವತ ಕಥಾ, ಬಾರಾ ಅಭಂಗ ಪಾಠ, ಅಖಂಡ ರುದ್ರಾಭಿಷೇಕ, ಭಜನೆ, ಕೀರ್ತನೆ, ಸಂಗೀತ ಮೊದಲಾದ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net