ಶ್ರದ್ಧೆ, ಬದ್ಧತೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ: ಎಚ್.ಡಿ. ದೇವರಾಜು

ಶ್ರದ್ಧೆ, ಬದ್ಧತೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ: ಎಚ್.ಡಿ. ದೇವರಾಜು
Published on

ಹಾಸನ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಬದ್ಧತೆ ಹಾಗೂ ಸಮಯಪಾಲನೆ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಎಚ್.ಡಿ. ದೇವರಾಜು ಹೇಳಿದರು.

ನಗರದ ರಸ್ತೆಯ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವತಿಯಿಂದ ಶನಿವಾರ ನಡೆದ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವ ವೇಳೆಯಲ್ಲಿ ಸಮಯವನ್ನು ವ್ಯರ್ಥ ಮಾಡದೆ ಶಿಸ್ತುಬದ್ಧವಾಗಿ ಓದಬೇಕು. ಜೀವನದಲ್ಲಿ ಒಂದು ಗುರಿ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಜೀವನದಲ್ಲಿ ನಾವೇನಾಗಬೇಕು ಎಂಬುವುದರ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ಸಲಹೆ ನೀಡಿದರು.

ನಮ್ಮ ಜೀವನದಲ್ಲಿ ಏನಾದರೂ ಬರುವುದಾದರೆ ಅದು ತಾನಾಗೇ ಬರುತ್ತದೆ ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಇರಬೇಕು. ಹಾಗೆಯೇ ನಾವು ಮಾತನಾಡುವ ರೀತಿ ಕಲ್ಪವೃಕ್ಷದಂತಿರಬೇಕು ಮತ್ತು ಆ ಮಾತು ಎರಡು ರೀತಿಯಲ್ಲಿ ಇರುತ್ತದೆ ಒಂದು ಒಬ್ಬರಿಗೆ ಕಿರಿಕಿರಿಯನ್ನು ಉಂಟು ಮಾಡಿದರೆ ಇನ್ನೊಂದು ಸಮಾಧಾನವನ್ನು ತರುವಂತಹ ಮಾತಾಗಿರುತ್ತದೆ. ಹಾಗೆಯೇ ನಾವು ಮಾತನಾಡುವ ಪ್ರತಿ ಮಾತನ್ನು ತುಂಬಾ ಯೋಚಿಸಿ ಮಾತನಾಡಬೇಕೆ ಹೊರತು ಮಾತನಾಡಿದ ಮೇಲೆ ಯೋಚಿಸಬಾರದು ಎಂಬುದನ್ನು ನಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಶಿಸ್ತು ಇರಬೇಕು. ಸಮಾಜದಲ್ಲಿ ಸಾಧನೆ ಮಾಡಿದ ಅನೇಕರು ತಾವು ಹೆಚ್ಚಾಗಿ ವಿದ್ಯಾಭ್ಯಾಸ ಮಾಡದೆ ಇದ್ದರೂ ಜೀವನದಲ್ಲಿ ಶಿಸ್ತು ಹಾಗೂ ನಿರಂತರ ಶ್ರಮದಿಂದ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಪದವಿಯನ್ನು ಆಯ್ಕೆ ಮಾಡಿಕೊಂಡರು ಆ ವಿಷಯದ ಬಗ್ಗೆ ಅಚ್ಚುಕಟ್ಟಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಹೇಮಾವತಿ, ಸುನಿತಾ, ಮೋಹನ್ ಕುಮಾರ್, ನಂದನ್, ಉಪನ್ಯಾಸಕ ಡಾ. ದಯಾನಂದ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net