

ಚಿತ್ರದುರ್ಗ: ಶ್ರೀಗುರು ರಾಘವೆಂದ್ರತೀರ್ಥ ಗುರು ಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ಬುಧವಾರ ನಡೆಯಿತು.
ನಗರದ ಆನೆ ಬಾಗಿಲ ಬಳಿಯ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ಯಾರಾಧನೆ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿತು.
ಮಧ್ಯಾರಾಧನೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಉತ್ಸವಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ರಾಯದ ದರ್ಶನ ಪಡೆದರು.
ಬೆಳಗ್ಗೆ ನಿರ್ಮಾಲ್ಯ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ, ಭಜನೆ, ಸಾಂಸ್ಕೃತಿಕ ಕಾರ‌್ಯಕ್ರಮ, ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಕಾರ‌್ಯಕ್ರಮಗಳು ನಡೆದವು. ಸಪ್ತಗಿರಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಸಂಜೆ ಸುಜೀತ್ ಕುಲಕರ್ಣಿ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
*ಇಂದು ಉತ್ತರಾರಾಧನೆ: ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆಯ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಗರದ ರಾಜ ಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. 23ರಂದು ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮ ರ್ಪಣೋತ್ಸವ ಕಾರ್ಯಕ್ರಮ ನಡೆಯಲಿದೆ.