ಶೌರ್ಯ ಮೆರೆವ ಪೊಲೀಸರಿಗಾಗಿ ಸೈಕಲ್ ರ‍್ಯಾಲಿ

H27 Cycle Rally 2
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ, ಪೊಲೀಸ್ ಧ್ವಜ ದಿನ ಮತ್ತು ರಾಷ್ಟ್ರೀಯ ಏಕತೆ ದಿನದ ಅಂಗವಾಗಿ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಸೈಕಲ್ ರ್ಯಾಲಿಗೆ ಡಿಸಿಪಿ (ಸಂಚಾರ ವಿಭಾಗ) ಆರ್.ಬಿ. ಬಸರಗಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಚನ್ನಮ್ಮ ವೃತ್ತದಿಂದ ಆರಂಭವಾದ ರ‍್ಯಾಲಿ ಹಳೇ ಬಸ್ ನಿಲ್ದಾಣ, ಹೊಸೂರ ವೃತ್ತ, ಗೋಕುಲ ರಸ್ತೆ, ರವಿ ನಗರ, ತೋಳನಕೆರೆ, ಶಿರೂರ ಪಾರ್ಕ್, ಟೆಂಡರ್​ಶ್ಯೂರ್ ರಸ್ತೆ, ವಿದ್ಯಾನಗರ, ಹಳೇ ಪಿ.ಬಿ. ರಸ್ತೆ ಮೂಲಕ ಸಾಗಿ ಗ್ಲಾಸ್ ಹೌಸ್​ನಲ್ಲಿ ಮುಕ್ತಾಯಗೊಂಡಿತು.

ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಸೇವೆ ಸಲ್ಲಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶೌರ್ಯ ಮೆರೆಯುತ್ತಾರೆ. ಪ್ರಾಣವನ್ನೇ ಪಣವಾಗಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಾರೆ. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. 100ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಂಡಿದ್ದರು. ಎಸಿಪಿ ಎಂ.ಬಿ. ಹೊಸಮನಿ, ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಶ್ರೀಕಾಂತ ತೋಟಗಿ, ಸಿಬ್ಬಂದಿ ಎಂ.ಎಸ್. ನಿಡವಣಿ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net