

ಚಿತ್ರದುರ್ಗ: ರಾಜ್ಯದ ಪ್ರಸಿದ್ಧ ಹಿಂದು ಮಹಾಗಣಪತಿ ಮಹೋತ್ಸವವನ್ನು ಈ ಬಾರಿಯೂ ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಹ ಸಂಚಾಲಕ ಪ್ರಭಂಜನ್ ತಿಳಿಸಿದರು.
ಮಹೋತ್ಸವ, ಶೌರ್ಯ ರಥಯಾತ್ರೆ ಸಂಬಂಧ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಪೂರ್ವಜರ ಶೌರ್ಯ ಮತ್ತು ತ್ಯಾಗವನ್ನು ಯುವಸಮೂಹಕ್ಕೆ ತಿಳಿಸಲು ದೇಶಾದ್ಯಂತ ಶೌರ್ಯ ಜಾಗರಣಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಮ ಜನ್ಮಭೂಮಿ, ರಾಮಸೇತು ಹೋರಾಟ, ಗೋ ಮಾತೆಯ ರಕ್ಷಣೆ, ಲವ್ ಜಿಹಾದ್‌ನಿಂದ ಹಿಂದು ಯುವತಿಯರ ರಕ್ಷಣೆ, ಮತಾಂತರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ. ಕೋವಿಡ್ ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಾವಿರಾರು ಶವಗಳ ಅಂತ್ಯಸಂಸ್ಕಾರ, ರೋಗಿಗಳ ಚಿಕಿತ್ಸೆಗೆ ಸಹಕಾರ ನೀಡಿದ್ದೇವೆ. ವಿಎಚ್‌ಪಿ, ಬಜರಂಗದಳ ಹಿಂದು ಧರ್ಮ, ಸಂಸ್ಕೃತಿಯ ಉಳಿವಿಗಾಗಿಯೇ ಶ್ರಮಿಸುತ್ತಿರುವ ಸಂಘಟನೆಗಳಾಗಿವೆ ಎಂದು ಹೇಳಿದರು.
ರಥಯಾತ್ರೆ: ಶೌರ್ಯ ರಥ ಯಾತ್ರೆಯೂ ಸೆ.25ರಂದು ಚಿತ್ರದುರ್ಗದಿಂದ ಆರಂಭವಾಗಿ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿದ ನಂತರ ಅ. 10ರಂದು ಉಡುಪಿಯಲ್ಲಿ ಸಮರೋಪಗೊಳ್ಳಲಿದೆ ಎಂದು ತಿಳಿಸಿದರು.
ಉತ್ಸವ ಸಮಿತಿ ಮಾರ್ಗದರ್ಶಕ ಬದರಿನಾಥ್ ಮಾತನಾಡಿ, ದೇಶಭಕ್ತಿ ಜಾಗೃತಗೊಳಿಸುವ ಉದ್ದೇಶಕ್ಕಾಗಿ ಈ ರಥಯಾತ್ರೆ ಸಂಚರಿಸಲಿದೆ. ಯುವಸಮೂಹ ದುಶ್ಚಟಗಳಿಗೆ ದಾಸರಾಗದೆ, ಬೌದ್ಧಿಕ ಹಾಗೂ ಶಾರೀರಿಕವಾಗಿ ಈ ದೇಶದ ಆಸ್ತಿಯನ್ನಾಗಿ ಮಾಡುವುದು ಕೂಡ ಪ್ರಮುಖ ಅಂಶಗಳಲ್ಲೊಂದು. ಇದರ ಯಶಸ್ಸಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮುಖಂಡರಾದ ಸಂದೀಪ್, ರುದ್ರೇಶ್, ಕೇಶವ, ರಂಗನಾಥ್ ಇತರರಿದ್ದರು.