ಶೌರ್ಯ ಜಾಗರಣ ರಥಯಾತ್ರೆ 25ಕ್ಕೆ ಚಾಲನೆ

Jaganatha shasthree
Published on

ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ಹಿಂದು ಮಹಾಗಣಪತಿ ಶಿವಶಕ್ತಿ ಮಂಟಪ ಮುಂಭಾಗ ಸೆ. 25ರಂದು ಬೆಳಗ್ಗೆ 10ಕ್ಕೆ ಶೌರ್ಯ ಜಾಗರಣ ರಥಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ವಿಶ್ವ ಹಿಂದು ಪರಿಷತ್‌ನ ರಾಜ್ಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಎಚ್‌ಪಿ ಮತ್ತು ಬಜರಂಗದಳದಿಂದ ಯಾತ್ರೆ ಹಮ್ಮಿಕೊಂಡಿದ್ದು, ಹಿಂದು ಯುವಸಮೂಹದವರಲ್ಲಿ ನಮ್ಮ ಪೂರ್ವಜರು, ಹುತಾತ್ಮರು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆ ತಿಳಿಸುವ ಮೂಲಕ ದೇಶಭಕ್ತಿ ಮೈಗೂಡಿಸಿಕೊಳ್ಳಲು ಸ್ಪೂರ್ತಿ ಹಾಗೂ ಸಂಕಲ್ಪ ತೊಡುವಂತೆ ಉತ್ತೇಜಿಸುವ ಯಾತ್ರೆಯಾಗಿದೆ ಎಂದರು.

ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸುವುದು. ಯುವ ಪೀಳಿಗೆಯನ್ನು ವ್ಯಸನಗಳಿಂದ ಮುಕ್ತಿಗೊಳಿಸಿ, ಸಂಸ್ಕಾರ ಬೆಳೆಸುವುದು. ಲವ್ ಜಿಹಾದ್, ಮತಾಂತರ, ಗೋಹತ್ಯೆ ಇತರೆ ಪಿಡುಗುಗಳನ್ನು ತಡೆದು ಹಿಂದು ಧರ್ಮ ರಕ್ಷಿಸುವುದೇ ಇದರ ಮುಖ್ಯ ಉದ್ದೇಶ. ಯುವಶಕ್ತಿ ರಾಷ್ಟ್ರಶಕ್ತಿಯನ್ನಾಗಿಸುವ ನಿಟ್ಟಿನಲ್ಲಿ ವಿನೂತನ ಪ್ರಯತ್ನವಾಗಿದೆ ಎಂದು ಹೇಳಿದರು.

ಬಜರಂಗದಳ ರಾಜ್ಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಎಸ್.ಆರ್.ಪ್ರಭಂಜನ್ ಮಾತನಾಡಿ, ಹಿಂದು ಧರ್ಮದ ಗತವೈಭವ, ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುವುದರ ಜೊತೆಗೆ ರಾಜಕೀಯ ಲಾಭಕ್ಕಾಗಿ ಅನ್ಯರಿಂದ ಆಗುತ್ತಿರುವ ತುಷ್ಟೀಕರಣ ತಡೆದು, ಗೌರವ ಮತ್ತು ಶಾಂತಿಯುತ ವಾತಾವರಣ ಸೃಷ್ಟಿಸುವುದೇ ಯಾತ್ರೆಯ ಧ್ಯೇಯವಾಗಿದೆ ಎಂದರು.

ಚಾಲನೆ ದಿನದಂದು ವಿವಿಧ ಮಠಾಧೀಶರು ನೇತೃತ್ವ ವಹಿಸಲಿದ್ದಾರೆ. ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಅವರಿಂದ ಪ್ರಾಸ್ತಾವಿಕ ನುಡಿ, ವಿಎಚ್‌ಪಿ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಯನ್ ದಿಕ್ಸೂಚಿ ಭಾಷಣ, ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹರು ಪಟ್ಟಾಭಿರಾಮ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶೌರ್ಯ ಜಾಗರಣ ರಥಯಾತ್ರೆ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಪ್ರಾಂತ ಸಮಿತಿ ಸದಸ್ಯ ಟಿ.ಬದರಿನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net