

ಕೊಳ್ಳೇಗಾಲ: ತಾಲೂಕು ಕಚೇರಿ ಹಿಂಭಾಗದಲ್ಲಿ ನಗರಸಭೆ ವತಿಯಿಂದ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನನೆಗುದಿಗೆ ಬಿದ್ದಿದ್ದ ಶೌಚಗೃಹಕ್ಕೆ ಯುಜಿಡಿ ಪೈಪ್‌ಲೈನ್ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ಜೂ.4 ರಂದು ತಾಲೂಕು ಕಚೇರಿಗಿಲ್ಲ ಸೌಕರ್ಯ ಎಂಬ ಶೀರ್ಷಿಕೆಯಡಿ ವಿಸ್ತೃುತ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರು ನಗರಸಭೆ ಅಧಿಕಾರಿಗಳಿಗೆ ಜೂ.9 ರಿಂದ ಸಾರ್ವಜನಿಕರ ಉಪಯೋಗಕ್ಕೆ ಶೌಚಗೃಹ ನೀಡಲು ಖಡಕ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಶೌಚಗೃಹಕ್ಕೆ ಯುಜಿಡಿ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಿದ್ದಾರೆ. ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿದ ನಗರಸಭೆ ಇಂಜಿನಿಯರ್ ನಾಗೇಂದ್ರ, ಶೌಚಗೃಹಕ್ಕೆ ವೈರಿಂಗ್ ಕೆಲಸ ಆಗಬೇಕಿದೆ. ಈಗಾಗಲೇ ಯುಜಿಡಿ ಸಂಪರ್ಕ ಕಾಮಗಾರಿ ಆರಂಭಿಸಲಾಗಿದೆ. ಉಪವಿಭಾಗಾಧಿಕಾರಿ ಸೂಚನೆಯಂತೆ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತದೆ ಎಂದರು.
ತಾಲೂಕು ಕಚೇರಿ ಕಟ್ಟಡ ಹಳೆಯದಾಗಿ ಕಳೆಗುಂದಿತ್ತು. ಹಾಗಾಗಿ ಕಟ್ಟಡಕ್ಕೆ ಬಣ್ಣ ಬಳಿಸಲಾಗಿದೆ. ಜೂ.9ರಂದು ಶೌಚಗೃಹವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂತೆಯೇ, ಉಳಿದ ಕಾಮಗಾರಿಯೂ ಆರಂಭಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಆರ್‌ಒ ಫ್ಲಾಂಟ್ ಹಾಕಿಸಲಾಗುವುದು. ಬಿ.ಆರ್.ಮಹೇಶ್ ಉಪವಿಭಾಗಾಧಿಕಾರಿ, ಕೊಳ್ಳೇಗಾಲ.