ಶೌಚಗೃಹ ಸ್ವಚ್ಛಗೊಳಿಸಿದ ದಸಂಸ ಮುಖಂಡರು!

4HDK4
ಎಚ್.ಡಿ.ಕೋಟೆಯ ತಾಲೂಕು ಆಡಳಿತ ಸೌಧದಲ್ಲಿನ ಶೌಚಹೃಹಗಳನ್ನು ದಸಂಸ ಸಂಘಟನೆ ಮುಖಂಡರು ಸ್ವಚ್ಛಗೊಳಿಸಿದರು. ಸಣ್ಣಕುಮಾರ್, ಸಂಚಾಲಕ ಚಾ.ಶಿವಕುಮಾರ್, ಟೌನ್ ಸಂಚಾಲಕ ಚನ್ನಕೋಟೆ ಇದ್ದರು.
Published on

ನೀರಿಲ್ಲದೆ ಇಪ್ಪತ್ತು ದಿನಗಳಿಂದ ಗಬ್ಬೆದ್ದು ನಾರುತ್ತಿದ್ದ ಹಿನ್ನೆಲೆ


ಎಚ್.ಡಿ.ಕೋಟೆ: ತಾಲೂಕು ಆಡಳಿತ ಸೌಧದ ಶೌಚಗೃಹದಲ್ಲಿ ನೀರಿಲ್ಲದ ಕಾರಣ ಇಪ್ಪತ್ತು ದಿನಗಳಿಂದ ಗಬ್ಬುನಾರುತ್ತಿದ್ದು, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ತಾಲೂಕು ಮುಖಂಡರು ಶುಕ್ರವಾರ ಶೌಚಗೃಹಗಳನ್ನು ಶುಚಿಗೊಳಿಸಿದರು.

ಸಂಘಟನೆಯ ಹತ್ತಕ್ಕೂ ಹೆಚ್ಚು ಮುಖಂಡರು ಬ್ಲೀಚಿಂಗ್ ಪೌಡರ್, ಆ್ಯಸಿಡ್, ಫಿನಾಯಿಲ್, ಪೊರಕೆ ಹಿಡಿದು ಗಬ್ಬು ನಾರುತ್ತಿದ್ದ ಶೌಚಗೃಹಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟರು.

ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ತಾಲೂಕು ಆಡಳಿತ ಸೌಧದಲ್ಲಿ ಹತ್ತಕ್ಕೂ ಹೆಚ್ಚು ಇಲಾಖೆಗಳ ಕಚೇರಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಅಂತಸ್ತಿನಲ್ಲೂ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹವಿದ್ದು, ಬೋರ್‌ವೆಲ್ ಕೆಟ್ಟು ಹೋದ ಪರಿಣಾಮ ಇಪ್ಪತ್ತು ದಿನಗಳಿಂದ ಕಟ್ಟಡಕ್ಕೆ ನೀರು ಸರಬರಾಜಾಗಿಲ್ಲ. ಪರಿಣಾಮ ಶೌಚಗೃಹಗಳು ಗಬ್ಬು ನಾರುತ್ತಿದ್ದವು. ಈ ಬಗ್ಗೆ ಬಗ್ಗೆ ಹಲವಾರು ಬಾರಿ ತಹಸೀಲ್ದಾರ್ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಮುಂದಾಗಿರಲಿಲ್ಲ. ಹಾಗಾಗಿ ಸಂಘಟನೆ ವತಿಯಿಂದ ಇಂದು ಸಾಂಕೇತಿಕವಾಗಿ ಶುಚಿ ಮಾಡಲಾಗಿದೆ. ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಬಂದ ಉಪ ತಹಸೀಲ್ದಾರ್ ಮಹೇಶ್, ಒಂದು ವಾರದಿಂದ ಬೋರ್‌ವೆಲ್ ಕೆಟ್ಟು ಹೋಗಿದ್ದರಿಂದ ಸಮಸ್ಯೆ ಆಗಿದೆ. ತಿಂಗಳ ಹಿಂದೆ 16,000 ರೂ. ಖರ್ಚು ಮಾಡಿ ಮೋಟಾರ್ ರಿಪೇರಿ ಮಾಡಲಾಗಿತ್ತು. ಅಲ್ಲದೆ ಮೋಟಾರ್ ರಿಪೇರಿ ಮಾಡಿದ್ದವನಿಗೆ ಈ ಬಗ್ಗೆ ತಿಳಿಸಲಾಗಿತ್ತಾದರೂ ಆತ ಬಂದಿಲ್ಲ. ಅ ಹೀಗಾಗಿ ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಂದಿನ ಎರಡ್ಮೂರು ದಿನದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಚಾ.ಶಿವಕುಮಾರ್, ಟೌನ್ ಸಂಚಾಲಕ ಚನ್ನಕೋಟೆ, ಸದಸ್ಯರಾದ ಆಂಜನೇಯ, ಜಿಯಾರ ಸ್ವಾಮಿ, ಕಾಳಸ್ವಾಮಿ, ಮೀನಾಕ್ಷಿ, ಪುರುಷೋತ್ತಮ್, ಗ್ಯಾಸ್‌ಪ್ರಕಾಶ್, ಮಟಕೆರೆ ಮಹೇಶ್, ಕೆ.ಜಿ.ಹಳ್ಳಿ ರಾಚಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net