ಶೌಚಗೃಹ ಪೈಪ್‌ಲೈನ್ ದುರಸ್ತಿಗೆ ಆಗ್ರಹ

30blrp2
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಗೃಹದ ಕಲುಷಿತ ನೀರೆಲ್ಲ ಪೈಪ್‌ಲೈನ್ ದುರಸ್ತಿಪಡಿಸುವಂತೆ ಆಗ್ರಹಿಸಿ ಬಸ್ ಡಿಪೋ ವ್ಯವಸ್ಥಾಪಕಿ ವಿರುದ್ಧ ಆಟೋ ಚಾಲಕರು ಪ್ರತಿಭಟಿಸಿದರು.
Published on

ಬೇಲೂರು : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಗೃಹದ ಕಲುಷಿತ ನೀರೆಲ್ಲ ಪೈಪ್‌ಲೈನ್‌ನಿಂದ ಹೊರಬಂದು ಗಬ್ಬುವಾಸನೆ ಬರುತ್ತಿದ್ದರೂ ದುರಸ್ತಿ ಪಡಿಸದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯ ಆಟೋ ಚಾಲಕರು ಶೌಚಗೃಹಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.

ಆಟೋ ಚಾಲಕ ಚಂದ್ರು ಮಾತನಾಡಿ, ಬಸ್ ನಿಲ್ದಾಣದೊಳಗಿರುವ ಶೌಚಗೃಹದ ಕಲುಷಿತ ನೀರು ಹಾಗೂ ಕಲ್ಮಶ ಹೊರ ಹೋಗಲು ಅಳವಡಿಸಿದ್ದ ಪೈಪ್‌ಲೈನ್ ಮೂರು ದಿನಗಳಿಂದ ತುಂಬಿ ಮುಂದೆ ಸಾಗದೆ ನೀರೆಲ್ಲ ಆಟೋ ನಿಲ್ದಾಣದೊಳಕ್ಕೆ ಹರಿದು ಬರುತ್ತಿದೆ. ಇದರಿಂದ ಆಟೋ ನಿಲ್ದಾಣದಲ್ಲಿ ಗಬ್ಬು ವಾಸನೆಯಿಂದ ನಾವು ಸೇರಿದಂತೆ ಸಾರ್ವಜನಿಕರೂ ನಿಲ್ಲದಂತಾಗಿದೆ. ಈ ಬಗ್ಗೆ ಬಸ್ ನಿಲ್ದಾಣದ ಟಿಸಿ ಹಾಗೂ ಡಿಪೋ ವ್ಯವಸ್ಥಾಪಕರಿಗೆ ಮತ್ತು ಚಿಕ್ಕಮಗಳೂರು ವಿಭಾಗಿಯ ಅಧಿಕಾರಿಗೆ ದೂರವಾಣಿ ಮೂಲಕ ತಿಳಿಸಿದರೂ ಶೌಚಗೃಹದ ಪೈಪ್‌ಲೈನ್ ಸ್ವಚ್ಛಗೊಳಿಸದ ಕಾರಣ ಮೂರು ದಿನಗಳಿಂದ ಪರದಾಡುತ್ತಿದ್ದೇವೆ. ಶನಿವಾರ ಬೆಳಗ್ಗೆಯೊಳಗೆ ಸ್ವಚ್ಛಗೊಳಿಸದಿದ್ದಲ್ಲಿ ಬಸ್ ನಿಲ್ದಾಣದೊಳಕ್ಕೆ ಬರುವ ಬಸ್‌ಗಳನ್ನು ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಆಟೋಚಾಲಕರಾದ ಆನಂದ್(ವೆಂಕಟಚಲಪತಿ), ಕೇಶವಮೂರ್ತಿ, ಗೋಪಾಲ, ಮಹಾಂತೇಶ, ಸುಂದ್ರೇಶ್, ದೇವರಾಜು, ವಿನಯ್, ಹರೀಶ್, ಸುರೇಶ್, ಯೋಗೀಶ್, ಅಣ್ಣಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net