

ಚಿಕ್ಕಬಳ್ಳಾಪುರ: ಸಾಹಿತ್ಯದ ಮೂಲಕ ಅಸಮಾನತೆ, ಶೋಷಣೆ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿದ ನಾಡೋಜ ಡಾ.ಸಿದ್ಧಲಿಂಗಯ್ಯ ಚಿಂತನೆಗಳನ್ನು ಮಾದರಿಯಾಗಿ ಸ್ವೀಕರಿಸಬೇಕೆಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಗೀತ ನಮನ ಹಾಗೂ ನುಡಿ ನಮನದಲ್ಲಿ ಮಾತನಾಡಿ, ಶೋಷಿತ ಸಮುದಾಯ ಎದುರಿಸುತ್ತಿದ್ದ ಸಮಸ್ಯೆಗಳನ್ನು ಅರಿತುಕೊಂಡು ಸಿದ್ದಲಿಂಗಯ್ಯ ಅವರ ಒಡಲಾಳದ ಹಾಡುಗಳು ಚಳವಳಿಯನ್ನು ಪ್ರಗತಿಪರ ಹಾದಿಯಲ್ಲಿ ನಡೆಸಿದವು. ಅಸಮಾನತೆ ವಿರುದ್ಧ ಸಿಡಿದೇಳುವ ಹಾಡುಗಳಾದವು ಎಂದರು.
ಜನಪರ ಕಾಳಜಿ ಪ್ರದರ್ಶಿಸುತ್ತ ಕ್ರಾಂತಿಕಾರಿ ಬದಲಾವಣೆಗಳಿಗೆ ಶ್ರಮಿಸಿದರು. ಅದರಲ್ಲೂ ದಲಿತರಲ್ಲಿ ಸಾಮಾಜಿಕ ಮತ್ತು ನೈತಿಕ ಬಲವನ್ನು ತುಂಬಿದ ಪ್ರೇರಣೆದಾಯಕ ವ್ಯಕ್ತಿ, ವಿಧಾನಪರಿಷತ್ ಸದಸ್ಯ ಸೇರಿ ಹಲವು ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸಿದರೂ ಸರಳತೆಯನ್ನು ಬಿಡದ ಸಿದ್ಧಲಿಂಗಯ್ಯನವರ ಆದರ್ಶ ತತ್ವಗಳು ಅನುಕರಣೀಯ ಎಂದು ಬಣ್ಣಿಸಿದರು.
70ರ ದಶಕದಲ್ಲಿ ದಲಿತ ಚಳವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಸಿದ್ದಲಿಂಗಯ್ಯ ನಿರಂತರ ಸಭೆ, ಅಧ್ಯಯನ ಶಿಬಿರ, ಸಮ್ಮೇಳನಗಳ ಮೂಲಕ ಹೊಸ ಚಿಂತನೆಗಳನ್ನು ಮೂಡಿಸಿದ್ದು ದಲಿತರಲ್ಲಿ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಚಿಗುರೊಡೆಯಲು ಸಹಕಾರಿಯಾಯಿತು ಎಂದು ರಾಜ್ಯ ದಸಂಸ ಸಂಚಾಲಕ ಎನ್.ವೆಂಕಟೇಶ್ ಅಭಿಪ್ರಾಯಪಟ್ಟರು.
ಸಮಾನತೆಯ ವಾತಾವರಣ ನಿರ್ಮಾಣಕ್ಕೆ ಬುದ್ಧ, ಬಸವ, ಅಂಬೇಡ್ಕರ್, ಎಚ್.ನರಸಿಂಹಯ್ಯ, ಪೆರಿಯಾರ್, ಮಾರ್ಕ್ಸ್, ಸಿದ್ದಲಿಂಗಯ್ಯ ಪ್ರತಿಪಾದಿಸಿದ ಆಶಯಗಳಿಗೆ ಅನುಗುಣವಾಗಿ ಸಂಘಟಿತರಾಗಬೇಕೆಂದು ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಹೇಳಿದರು.
ಸಿದ್ಧಲಿಂಗಯ್ಯ ರಚಿತ ಕವನಗಳನ್ನು ಹಾಡುವ ಮೂಲಕ ಕಲಾವಿದರಾದ ಡಿ.ಆರ್.ರಾಜಪ್ಪ, ಎಂ.ಆನಂದ್, ಗ.ನ.ಅಶ್ವತ್ಥ್, ಜಿ.ಮುನಿರೆಡ್ಡಿ, ನಾಸ್ತಿಮ್ಮನಹಳ್ಳಿ ಗಂಗಾಧರ್, ದಲಿತ ಕಲಾ ಮಂಡಳಿ ಸಾಂಸ್ಕೃತಿಕ ಸಂಚಾಲಕ ಬಿ.ವಿ.ಆನಂದ್ ನುಡಿ ನಮನ ಸಲ್ಲಿಸಿದರು.
ಮೈಸೂರು ಸಮಾಜ ಕಲ್ಯಾಣ ಇಲಾ ಉಪ ನಿರ್ದೇಶಕ ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮುನಿರಾಜು, ಪ್ರಾಧ್ಯಾಪಕ ತಿಮ್ಮರಾಯಪ್ಪ , ಜಿಲ್ಲಾ ದಸಂಸ ಸಂಘಟನಾ ಸಂಚಾಲಕರಾದ ಎನ್.ಎ.ವೆಂಕಟೇಶ್, ಜಿ.ನಾರಾಯಣಸ್ವಾಮಿ, ಖಜಾಂಚಿ ಜಿ.ವಿ.ಗಂಗಪ್ಪ, ಸದಸ್ಯರಾದ ಪಿ.ನರಸಿಂಹಮೂರ್ತಿ, ಕೃಷ್ಣಾರೆಡ್ಡಿ, ಸಂಜಯ್ ಕುಮಾರ್ ಇತರರಿದ್ದರು.