

ಕೊಳ್ಳೇಗಾಲ: ಸಂತ ಸೇವಾಲಾಲ್ ಅವರು ಶೋಷಿತ ಸಮಾಜಗಳ ವೃತ್ತಿ ಬದುಕು ಮತ್ತು ಭವಿಷ್ಯವನ್ನು ರೂಪಿಸಲು ಶ್ರಮಿಸಿದ್ದರು ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲ್, ಬುದ್ಧ, ಬಸವಣ್ಣ ಅವರಂತಹ ಮಹಾನ್ ವ್ಯಕ್ತಿಗಳು ಹುಟ್ಟಿ ನೂರಾರು ವರ್ಷ ಕಳೆದಿದೆ. ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತೇವೆ. ಈ ಸಮಾಜಕ್ಕೆ ಅವರು ನೀಡಿದ ಅಪಾರ ಕೊಡುಗೆ ಇದಕ್ಕೆ ಕಾರಣ. ನಾವು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದೇವೆ ಅಂದರೆ ಅದಕ್ಕೆ ಮಹಾತ್ಮರ ಕೊಡುಗೆ ಕಾರಣ ಎಂದು ಬಣ್ಣಿಸಿದರು.
ಸಮಾಜ ಮತ್ತು ಬುಡಕಟ್ಟುಗಳನ್ನು ಗುರುತಿಸುವ ಕೆಲಸವನ್ನು ಈ ಮಹನೀಯರು ಮಾಡಿದ್ದಾರೆ. ಅಂತಹ ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ಸರ್ಕಾರ ಕಲ್ಪಿಸಿಕೊಡುತ್ತಿದೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವೆಂದು ಘೋಷಿಸಿ, 52 ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದಾರೆ ಎಂದು ಹೇಳಿದರು.
ಇದೊಂದು ಕ್ರಾಂತಿಕಾರಿ ಕೆಲಸವಾಗಿದೆ. ಇಲ್ಲಿವರಗೆ ನಿರ್ಲಕ್ಷೃಕ್ಕೆ ಒಳಗಾದವರಿಂದ ಮತ ಪಡೆಯಲಾಗುತ್ತಿತ್ತು. ಆದರೆ ಅವರಿಗೆ ಅಗತ್ಯ ಸೌಲಭ್ಯ, ಹಕ್ಕನ್ನು ನೀಡಲು ಸಾಧ್ಯವಾಗಿರಲಿಲ್ಲ ಎಂದರು.
ತಹಸೀಲ್ದಾರ್ ಮಂಜುಳಾ, ತಾ.ಪಂ. ಮುಖ್ಯಕಾರ್ಯ ನಿರ್ವಹಾಧಿಕಾರಿ ಮಹೇಶ್, ಬಿಇಒ ಚಂದ್ರಪಾಟೀಲ್, ಬಂಜಾರ ಸಮುದಾಯ ಜಿಲ್ಲಾಧ್ಯಕ್ಷ ಶಾಂತರಾಜು, ಪಳನಿಸ್ವಾಮಿ, ಚಿಕ್ಕರಾಜು ಮತ್ತಿತರಿದ್ದರು.