ಶೋಷಿತರ ನೋವಿಗೆ ಧ್ವನಿಯಾಗಿದ್ದ ಗಾಂಧೀಜಿ

21
Published on

ಮೈಸೂರು: ಗಾಂಧಿ ಇಡಿ ದೇಶವನ್ನು ಸುತ್ತಿ ಶೋಷಿತ ಸಮುದಾಯಗಳ ನೋವಿಗೆ ಧ್ವನಿಯಾದರು. ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರ ಉಳಿಯದೇ ತಮ್ಮ ಚಿಂತನೆ ಮತ್ತು ಕಠಿಣ ಆಚರಣೆಗಳ ಮೂಲಕ ಶಾಶ್ವತ ಮೌಲ್ಯವಾಗಿ ನಮ್ಮ ನಡುವೆ ಉಳಿದಿದ್ದಾರೆ ಎಂದು ಮೈವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಹೇಳಿದರು


ನಿರಂತರ ಫೌಂಡೇಷನ್ ವತಿಯಿಂದ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಹಜರಂಗ ರಂಗತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಿರಂತರ ಫೌಂಡೇಷನ್ ಯುವ ಸಮುದಾಯಕ್ಕೆ ಗಾಂಧಿ ಚಿಂತನೆಗಳನ್ನು ಪರಿಚಯಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳು ಯುವಕರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಗಾಂಧಿಯ ಆದರ್ಶಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಬೇಕು. ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂದರು.


ನಿರಂತರ ಫೌಂಡೇಷನ್ ಅಧ್ಯಕ್ಷ ಎಂ.ಎಂ.ಸುಗುಣ ಮಾತನಾಡಿ, ಕಳೆದ 15 ವರ್ಷಗಳಿಂದ ಸತತವಾಗಿ ರಂಗ ತರಬೇತಿ ಶಿಬಿರ ನಡೆಸಿಕೊಂಡು ಬರಲಾಗುತ್ತಿದ್ದು, ಅಂದಿನ ಸಂದರ್ಭಕ್ಕೂ ಇಂದಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ. ಇಂದಿನ ಯುವ ಸಮಾಜದ ಆದ್ಯತೆಗಳು ಬದಲಾಗಿವೆ. ಯುವಕರನ್ನು ಬೇರೆ ಬೇರೆ ಮಾಧ್ಯಮ ಜೀವನದ ಮೌಲ್ಯಗಳಿಂದ ದೂರ ಸೆಳೆಯುತ್ತಿವೆ. ಗಾಂಧಿಯ ವಿಚಾರಗಳನ್ನಿಟ್ಟುಕೊಂಡು ಈ ವರ್ಷ ಶಿಬಿರ ರೂಪಿಸಲಾಗಿದೆ. ಗಾಂಧಿಯ ಮೌಲ್ಯ ಸಮಾಜದಲ್ಲಿ ಹಿಂದೆಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ ಎಂದರು.


ಬಿ.ಕೆ.ಕಿರಣ್ ಮತ್ತು ಯಶಸ್ವಿನಿ ಅವರು ನಿರ್ದೇಶಿಸಿದ ’ಗಾಂಧಿ ಆಲ್ಬಮ್ಮು’ ಎಂಬ ದೃಶ್ಯರೂಪಕವನ್ನು ಪ್ರಸ್ತುತಪಡಿಸಲಾಯಿತು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್, ರಂಗಕರ್ಮಿಗಳಾದ ಪ್ರಸಾದ್ ಕುಂದೂರು,ಶ್ರೀನಿವಾಸ್ ಪಾಲಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net