ಶೋಷಿತರ ಜಾಗೃತಿ ಸಮಾವೇಶ 28ಕ್ಕೆ

Shoshitha Samudaya Pressmeet
Published on

ಚಿತ್ರದುರ್ಗ: ಹೊರವಲಯದ ಮಾದಾರ ಚನ್ನಯ್ಯ ಗುರುಪೀಠ ಸಮೀಪದ 150 ಎಕರೆ ಜಾಗದಲ್ಲಿ ಜ. 28ಕ್ಕೆ ರಾಜ್ಯಮಟ್ಟದ ಶೋಷಿತರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶಕ್ಕೆ ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರನ್ನು ಪಕ್ಷಾತೀತವಾಗಿ ಆಹ್ವಾನಿಸಿದ್ದೇವೆ. ಸಿಎಂ, ಡಿಸಿಎಂ ಭಾಗವಹಿಸಲಿದ್ದಾರೆ. ಅಂದಾಜು 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದರು.

ಹಕ್ಕೊತ್ತಾಯಗಳು: ಕಾಂತರಾಜು ಆಯೋಗದ ವರದಿ ರಾಜ್ಯ ಸರ್ಕಾರ ಕೂಡಲೇ ಸ್ವೀಕರಿಸಿ, ಯಥಾವತ್ತಾಗಿ ಅಂಗೀಕರಿಸಿ, ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು. ಇಡಬ್ಲುೃಎಸ್ ಶೇ 10ರ ಮೀಸಲಾತಿ ರದ್ದುಗೊಳಿಸಬೇಕು ಎಂದು ಇದೇ ವೇಳೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ಲೋಕಸಭೆ, ವಿಧಾನಸಭೆಗಳಲ್ಲಿ ಹಿಂದುಳಿದ ಸಮುದಾಯದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಬೇಕು. ಇವು ನಮ್ಮ ಪ್ರಮುಖ ಹಕ್ಕೊತ್ತಾಯವಾಗಿವೆ ಎಂದರು.

ವಿವಿಧ ಸಮುದಾಯಗಳ ಮುಖಂಡರಾದ ವೆಂಕಟರಾಮಯ್ಯ, ಸುಬ್ರಮಣ್ಯ, ವೆಂಕಟಸುಬ್ಬರಾವ್, ಸಿ.ಟಿ.ಕೃಷ್ಣಮೂರ್ತಿ, ಬಿ.ಟಿ.ಜಗದೀಶ್, ನಿರಂಜನಮೂರ್ತಿ, ಖಾಸಿಂ ಆಲಿ, ಶ್ರೀರಾಮ್, ರಾಮಜ್ಜ, ಎನ್.ಡಿ.ಕುಮಾರ್, ಶಶಿಕಲಾ ಸುರೇಶ್‌ಬಾಬು, ಮೂರ್ತಿ, ಪ್ರತಾಪ್‌ಜೋಗಿ, ಲಕ್ಷ್ಮಿಕಾಂತ, ಶಫಿ ಉಲ್ಲಾ, ರಾಜಣ್ಣ, ಮಂಜುನಾಥ್, ದುರುಗೇಶಪ್ಪ, ಪ್ರಕಾಶಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net