ಶೋಷಿತರ ಅಭಿವೃದ್ಧಿಗೆ ಶ್ರಮವಹಿಸಿ

27 yerriswamy 06
Published on

ಬಳ್ಳಾರಿ : ಪರಿಶಿಷ್ಟ ಸಮುದಾಯವರ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಬದುಕು ರೂಪಿಸುವ ಕೆಲಸವಾಗಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಏರ್ಪಡಿಸಿದ್ದ ಶುಕ್ರವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಇಲಾಖೆ ಕಚೇರಿಗಳಲ್ಲಿಯೂ ಮೀಸಲಾತಿ ಉದ್ಯೋಗಾವಕಾಶ ಕಲ್ಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು. ಜಿಲ್ಲೆಯಲ್ಲಿ ದೇವದಾಸಿಯರ ಏಳಿಗೆಗಾಗಿ ರೂಪಿಸಿದ ಕಾರ್ಯಯೋಜನೆಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಸಮಿತಿಗೆ ವರದಿ ನೀಡಬೇಕು. ಜಿಲ್ಲೆಯಲ್ಲಿ ಪರಿಶಿಷ್ಟರ ಕಾಲನಿಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಸಮುದಾಯ ಭವನಗಳನ್ನು ಕಲ್ಪಿಸಬೇಕು. ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಲು ಗ್ರಾಮೀಣ ಭಾಗದಲ್ಲಿ ಎಸ್‌ಡಿಎಂಸಿ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು. ಜಿಲ್ಲೆಯ ಆರಣ್ಯ ಪ್ರದೇಶದ ಅರಣ್ಯ ವಾಸಿಗಳಿಗೆ ಸಂಬಅಧಪಟ್ಟಂತೆ ಪುನರ್ವಸತಿ ಯೋಜನೆಯಡಿ ರಚಿಸಬೇಕಾಗಿದ್ದ ರಕ್ಷಣಾ ಸಮಿತಿ ರಚಿಸದಿರುವುದಕ್ಕೆ ಅಧಿಕಾರಿಗಳು ವಿರುದ್ಧ ನರೇಂದ್ರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆಯಲ್ಲಿ ಮೀಸಲಾತಿ : ಲೋಕೋಪಯೋಗಿ, ನೀರಾವರಿ, ಜೆಸ್ಕಾಂ, ಪಿಆರ್‌ಇಡಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳುವ ಸಿವಿಲ್, ಮೂಲಸೌಕರ್ಯ ಕಾಮಗಾರಿಗಳ ಪೈಕಿ 1 ಕೋಟಿ ರೂ. ವರೆಗಿನ ಕಾಮಗಾರಿಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಅನ್ವಯ ಗುತ್ತಿಗೆ ನೀಡಲು ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ವಿವಿಧ ಕಾಮಗಾರಿಗಳನ್ನು ಕ್ಲಬ್ ಮಾಡಿ ಪ್ಯಾಕೇಜ್ ಆಧಾರದ ಮೇಲೆ ಟೆಂಡರ್ ಕರೆಯುತ್ತಿರುವುದಿರಂದ ಈ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿಯಿಂದ ವಂಚಿಸಲಾಗುತ್ತಿದೆ. ಕೂಡಲೆ ಇದನ್ನು ಸರಿಪಡಿಸಿ ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ವಿವಿಧ ಇಲಾಖೆಗಳ ಎಲ್ಲಾ ಎಂಜನಿಯರ್‌ಗಳಿಗೆ ಸೂಚಿಸಿದರು.
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 14,00,970 ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,33,180 ಪುರುಷರು ಮತ್ತು 1,34,213 ಮಹಿಳೆಯರು ಇದ್ದಾರೆ. ಪರಿಶಿಷ್ಟ ಪಂಗಡದಲ್ಲಿ 1,31,119 ಪುರುಷರು ಮತ್ತು 1,31,553 ಮಹಿಳೆಯರು ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 65 ದೌರ್ಜನ್ಯ ಪ್ರಕರಣಗಳು ನಡೆದಿದ್ದು, 127 ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೃಷಿ, ಪಶು ಸಂಗೋಪನಾ, ಇಂಧನ, ಮೀನುಗಾರಿಕೆ, ಸಹಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಡಿಯ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಐಹೊಳೆ ದುರ್ಯೋಧನ, ಕೃಷ್ಣ ನಾಯಕ, ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್, ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಸೀನ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net