ಶೋಷಿತ ಸಮುದಾಯಗಳ ಅಸ್ಮಿತೆ ಅರಸು

20M.D.R.1
Published on

ಮದ್ದೂರು: ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತಂದು ರಾಜ್ಯದಲ್ಲಿ 21 ಲಕ್ಷ ಎಕರೆ ಭೂಮಿಯನ್ನು ನಿರ್ಗತಿಕರಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದವರು ಡಿ.ದೇವರಾಜ ಅರಸು ಅವರು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಬುಧವಾರ ಹೇಳಿದರು.

ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ಅವರು ಸರ್ವ ಜನಾಂಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನುಗಳನ್ನು ಜಾರಿಗೊಳಿಸಿದ ಪರಿಣಾಮ ಅವರನ್ನು ಸದಾ ನೆನೆಯುವಂತಾಗಿದೆ ಎಂದರು.

ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದು ಕೊಟ್ಟು ಜೀತ ಪದ್ಧತಿ, ಮಲ ಹೊರುವ ಪದ್ಧತಿ ನಿರ್ಮೂಲನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತ ಬಡವರು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಇದ್ದರು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದರು.

ಭಾರತೀ ಕಾಲೇಜು ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ ಕಾರ್ಯಕ್ರಮ ಕುರಿತು ಪ್ರಧಾನ ಭಾಷಣ ಮಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಸುನೀತಾ, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜ್, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮೇಗೌಡ, ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ದಲಿತ ಮುಖಂಡ ನಿಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net