

ಸಿರಗುಪ್ಪ: ಡಾ.ಬಿ.ಆರ್.ಅಂಬೇಡ್ಕರ್ ಅವರ ಅಸಾಧಾರಣ ಕೊಡುಗೆಗಳನ್ನು ನಮಗೆ ನೆನಪಿಸುವುದರೊಂದಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದೆಡೆಗೆ ನಮ್ಮ ನಿರಂತರ ಪ್ರಯಾಣವನ್ನು ಪ್ರತಿಬಿಂಬಿಸಲು ಜಯಂತಿ ಕಾರ್ಯಕ್ರಮ ನಮಗೆ ಅವಕಾಶ ಒದಗಿಸುತ್ತದೆ ಎಂದು ಉಪನ್ಯಾಸಕ ಡಾ.ಕೆ.ಎಂ.ಚಂದ್ರಕಾಂತ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಸಮಾಜಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಐತಿಹಾಸಿಕವಾಗಿ ಸ್ಮರಣೀಯ ವ್ಯಕ್ತಿಯಾಗಿದ್ದಾರೆ. ಭಾರತದ ಶೋಷಿತ ವರ್ಗಗಳ ನಾಯಕರಾಗಿದ್ದಾರೆ. ದೇಶದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೀನ ದಲಿತರ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದರು ಎಂದು ಹೇಳಿದರು.
ಬಸವ ಬಳಗದ ಬಸವರಾಜಪ್ಪ ಮಾತನಾಡಿ, ಬುದ್ಧ ಪ್ರಣತಿ, ಬಸವ ಬತ್ತಿ ಹಾಗೂ ಅಂಬೇಡ್ಕರ್ ತೈಲ ಇದ್ದ ಹಾಗೆ. ಈ ಮೂವರು ಸೇರಿದಾಗ ದೀಪ ಪ್ರಜ್ವಲಿಸುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮೆಲ್ಲರ ಜೀವನವೂ ದೀಪದ ಬೆಳಕಿನಂತೆ ಪ್ರಜ್ವಲಿಸುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಅಭಿನಂದಿಸಲಾಯಿತು. ತಹಸೀಲ್ದಾರ್ ಎಚ್.ವಿಶ್ವನಾಥ, ಗುರುಬಸವ ಮಠದ ಬಸವ ಭೂಷಣ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ರೇಣುಕಮ್ಮ ವೆಂಕಟೇಶ, ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ, ತಾ.ಪಂ ಇಒ ಪವನ್ ಕುಮಾರ್, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ ಸತೀಶ್, ಪೌರಾಯುಕ್ತ ಗುರುಪ್ರಸಾದ್, ಡಾ.ಬಿ.ಆರ್ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಡಾ.ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಎಂ.ದೊಡ್ಡ ವೀರೇಶ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ, ಕ.ರಾ.ಸ.ನೌ.ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ, ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ ಇದ್ದರು.
ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು.