

ಸಿರವಾರ: ಬಿ.ಆರ್.ಅಂಬೇಡ್ಕರ್ ಬಳಿಕ ಶೋಷಿತ ವರ್ಗಗಳ ಪರ ಸಿಎಂ ಸಿದ್ದರಾಮಯ್ಯ ಮಾತ್ರ ಧ್ವನಿ ಎತ್ತುತ್ತಿದ್ದಾರೆ ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ಹೇಳಿದರು.
ಜಕ್ಕಲದಿನ್ನಿ ಗ್ರಾಮದಲ್ಲಿ ಹಾಲುಮತ ಸಮಾಜದ ವತಿಯಿಂದ ಆಯೋಜಿಸಿದ್ದ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಾಲುಮತ ಸಮಾಜ ಎಲ್ಲ ಜನಾಂಗದವರೊಂದಿಗೆ ಸಹೋದರತ್ವ ಭಾವನೆಯಿಂದ ಬಾಳುತ್ತಿದೆ. ಹಾಲುಮತ ಹಾಗೂ ವಾಲ್ಮೀಕಿ ಸಮುದಾಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಲುಮತ ಸಮುದಾಯ ಪರಮಾತ್ಮನಿಗೆ ಹತ್ತಿರವಾಗಿದೆ ಎಂಬ ನಂಬಿಕೆ ನಮ್ಮಲ್ಲಿ ಇದೆ. ನಾವು ಹಾಲುಮತ ಸಮುದಾಯದ ಜತೆಗಿದ್ದರೆ ಪರಮಾತ್ಮನಿಗೆ ಹತ್ತಿರವಾಗಬಲ್ಲೆವು ಎನ್ನುವ ನಂಬಿಕೆ ನನ್ನದು ಎಂದು ಹೇಳಿದರು.
ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ಕನಕದಾಸರು ಮಾನವ ಕುಲಕ್ಕೆ ದಾರಿ ದೀಪ ಎಂದು ಬಣ್ಣಿಸಿದರು. ಗುರುವಿನ ಸಿದ್ದಯ್ಯ ತಾತ ಗಬ್ಬೂರು, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಎಸ್.ಪ್ರಭಾವತಿ, ಪ್ರಮುಖರಾದ ತ್ರಿವಿಕ್ರಮ ಜೋಶಿ, ಕೆ.ಕರಿಯಪ್ಪ ಸಿಂಧನೂರು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕೆ.ಬಸವಂತಪ್ಪ, ಡಾ.ವೆಂಕನಗೌಡ ಬೊಮ್ಮನಾಳ, ಸತ್ಯನಾರಾಯಣ ವಕೀಲ, ಎಚ್.ಕೆ.ಅಮರೇಶ ಇತರರಿದ್ದರು.