ಶೋಷಣೆಗೆ ಕಡಿವಾಣ ಹಾಕದಿದ್ದಲ್ಲಿ ಹೋರಾಟ

23. Pyp.001
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ತಂಬಾಕು ಖರೀದಿದಾರರು ಮತ್ತು ತಂಬಾಕು ಮಂಡಳಿಯ ಅಧಿಕಾರಿಗಳೊಂದಿಗೆ ಶಾಸಕ ಕೆ. ಮಹದೇವ್ ಗುರುವಾರ ಸಭೆ ನಡೆಸಿ ಮಾತನಾಡಿದರು. ಹರಾಜು ಅಧೀಕ್ಷಕರಾದ ಶಂಭುಲಿಂಗೇಗೌಡ, ರಾಮಮೋಹನ್ ಸೂರಿ, ಪ್ರಭಾಕರನ್, ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ಪೂರ್ಣೇಶ್ ಮತ್ತಿತರರು ಇದ್ದರು.
Published on

ಪಿರಿಯಾಪಟ್ಟಣ: ತಂಬಾಕು ಬೆಳೆಗಾರರ ಮೇಲೆ ನಡೆಯುತ್ತಿರುವ ಶೋಷಣೆಗೆ ಕಡಿವಾಣ ಹಾಕದಿದ್ದಲ್ಲಿ ತಂಬಾಕು ಬೆಳೆಗಾರರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಕೆ. ಮಹದೇವ್ ಎಚ್ಚರಿಕೆ ನೀಡಿದರು.

ದಿನೇ ದಿನೇ ತಂಬಾಕಿನ ಬೆಲೆ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ಆವರಣದಲ್ಲಿ ತಂಬಾಕು ಖರೀದಿದಾರರು ಮತ್ತು ತಂಬಾಕು ಮಂಡಳಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದರು.

ತಂಬಾಕು ಹರಾಜು ಪ್ರಕ್ರಿಯೆ ಆರಂಭಗೊಂಡ ಮೊದಲ ದಿನಗಳಲ್ಲಿ ಪ್ರತಿ ಕೆಜಿ ಉತ್ತಮ ಗುಣಮಟ್ಟದ ತಂಬಾಕಿಗೆ 270 ರೂ.ವರೆಗೂ ದರ ನೀಡಿ ಖರೀದಿಸಿದ್ದ ತಂಬಾಕು ಖರೀದಿದಾರ ಕಂಪನಿಗಳು ಕಳೆದ 15 ದಿನಗಳಿಂದ ಅದೇ ಉತ್ತಮ ಗುಣಮಟ್ಟದ ತಂಬಾಕನ್ನು ಕೇವಲ 210 ರಿಂದ 220 ರೂ. ನೀಡಿ ಖರೀದಿಸುವ ಮೂಲಕ ತಂಬಾಕು ಬೆಳೆಗಾರರಿಗೆ ಅನ್ಯಾಯವೆಸಗುತ್ತಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಉತ್ಕೃಷ್ಟ ಗುಣಮಟ್ಟದ ವರ್ಜಿನಿಯ ತಂಬಾಕಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದರೂ ಖರೀದಿದಾರ ಕಂಪನಿಗಳು ತಂಬಾಕಿಗೆ ಬೇಡಿಕೆ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ರಾಜ್ಯದ ತಂಬಾಕು ಬೆಳೆಗಾರರಿಗೆ ವಂಚನೆ ಮಾಡುತ್ತಿವೆ ಎಂದು ದೂರಿದರು.

ತಂಬಾಕು ಮಂಡಳಿಯು ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 100 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಗೆ ಅನುಮತಿ ನೀಡಿತ್ತು. ಆದರೆ, ಅತಿವೃಷ್ಟಿಯಿಂದಾಗಿ ತಂಬಾಕಿನ ಇಳುವರಿ ಕುಸಿತಗೊಂಡಿದ್ದು ಅಧಿಕೃತ ತಂಬಾಕು ಬೆಳೆಗಾರರಿಂದ 60 ಮಿಲಿಯನ್ ಮತ್ತು ಕಾರ್ಡ್‌ದಾರರು ಹಾಗೂ ಅನಧಿಕೃತ ತಂಬಾಕು ಬೆಳೆಗಾರರಿಂದ 4 ಮಿಲಿಯನ್ ಸೇರಿದಂತೆ ಒಟ್ಟಾರೆ 64 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆ ಆಗಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಇಳುವರಿ ಕುಸಿತಗೊಂಡಿರುವುದರಿಂದ ಪ್ರತಿ ಕೆಜಿ ತಂಬಾಕಿಗೆ ಸರಾಸರಿ 300 ರೂ.ಗಳವರೆಗೆ ಬೆಲೆ ಸಿಗಬಹುದು ಎಂದು ತಂಬಾಕು ಬೆಳೆಗಾರರು ನಿರೀಕ್ಷೆಯಲ್ಲಿದ್ದರು. ಆದರೆ ಖರೀದಿದಾರ ಕಂಪನಿಗಳ ಏಕಾಏಕಿ ನಿರ್ಧಾರದಿಂದಾಗಿ ತಂಬಾಕಿನ ದರ ದಿಢೀರ್ ಕುಸಿತವಾಗಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ದರ ಕುಸಿತದಿಂದಾಗಿ ಈಗಾಗಲೇ ರಾಜ್ಯದ ಹಲವು ತಂಬಾಕು ಹರಾಜು ಮಾರುಕಟ್ಟೆಗಳಲ್ಲಿ ತಂಬಾಕು ಬೆಳೆಗಾರರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಖರೀದಿದಾರ ಕಂಪನಿಗಳು ತಂಬಾಕು ಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈ ಸಾಲಿನ ಹರಾಜು ಪ್ರಕ್ರಿಯೆ ಮುಕ್ತಾಯದವರೆಗೂ ತಂಬಾಕಿಗೆ ಉತ್ತಮ ದರ ನೀಡುವಂತೆ ಆಗ್ರಹಿಸಿದರು.

ತಂಬಾಕು ಹರಾಜು ಮಾರುಕಟ್ಟೆಯ ಹರಾಜು ಅಧೀಕ್ಷಕ ಶಂಭುಲಿಂಗೇಗೌಡ, ರಾಮಮೋಹನ್ ಸೂರಿ, ಪ್ರಭಾಕರನ್, ಐಟಿಸಿ ಕಂಪನಿಯ ಲೀಫ್ ಮ್ಯಾನೇಜರ್ ಪೂರ್ಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net