ಶೋಷಣೆ ವಿರುದ್ಧ ಪ್ರತಿಭಟನೆ ನಡೆಸಿ

2-msk-1
Published on

ಮಸ್ಕಿ: ಮಹಿಳೆಯರು ಎಲ್ಲ ರಂಗದಲ್ಲಿ ಛಾಪು ಮೂಡಿಸಿದ್ದರೂ ಸಿಗಬೇಕಾದ ಪ್ರಾಧಾನ್ಯ ಇನ್ನೂ ಸಿಕ್ಕಿಲ್ಲ ಎಂದು ಸಾಹಿತಿ ಡಾ.ಎಚ್.ಎಸ್.ಅನುಪಮಾ ಹೇಳಿದರು.

ಪಟ್ಟಣದ ಶ್ರೀಭ್ರಮರಾಂಬ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘದಿಂದ ಆಯೋಜಿಸಿದ್ದ ‘ಹೆಣ್ಣು ಹೆಜ್ಜೆ’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹೆಣ್ಣುಮಕ್ಕಳು ಅಡುಗೆ ಮನೆಗೆ ಮೀಸಲಾಗಿ ತಮ್ಮಲ್ಲಿರುವ ಅಂತಃಶಕ್ತಿಯನ್ನು ಕುಂದಿಸಿಕೊಳ್ಳುತ್ತಿದ್ದಾರೆ. ಕುಟುಂಬಕ್ಕೆ ಮೀಸಲಾದ ಮಹಿಳೆ ಸಾಮಾಜಿಕ ಮಹಿಳೆಯಾಗಿ ಪರಿವರ್ತನೆ ಆಗಬೇಕಾಗಿದೆ. ಗಂಡ-ಹೆಂಡತಿ ಸಂಬಂಧದಲ್ಲಿ ಅಂತರವಿರದೆ ಸ್ನೇಹ ಸಂಬಂಧ ಬೆಳೆಯಬೇಕು ಎಂದರು.

ಸಮಾಜದಲ್ಲಿ ಆಡಳಿತ ಮಾರ್ಗದಿಂದ ಮಾತ್ರ ಬದಲಾವಣೆ ಸಾಧ್ಯ. ರಾಜ್ಯ ವಿಧಾನಸಭೆಯಲ್ಲಿ 224 ಶಾಸಕರ ಪೈಕಿ ಕೇವಲ 6 ಜನ ಮಹಿಳೆಯರಿದ್ದಾರೆ. ಇದರಿಂದ ಮಹಿಳೆಯರನ್ನು ರಾಜಕೀಯವಾಗಿ ದೂರ ಇಡಲಾಗಿದೆ ಎಂಬುದು ಸಾಬೀೀತಾಗಿದೆ. ಮಹಿಳೆಯರು ರಾಜಕೀಯವಾಗಿ ಮುಂದೆ ಬಂದಾಗ ಮಾತ್ರ ಸಮ ಸಮಾಜ ಬೆಳೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪುರುಷ ಸಮಾಜ ಸೃಷ್ಟಿಸಿದ ದೇವತೆಗಳ ಪುರಾಣ ಪುಣ್ಯ ಕಥೆಗಳಲ್ಲಿ ಮಹಿಳಾ ದೇವರಿಗೆ ಗೌರವ ಕೊಡಲಾಗಿದೆ. ಆದರೆ, ವಾಸ್ತವದ ಬದುಕಿನಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದ್ದು, ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರ ಮೇಲೆ ನಡೆಯುವ ಶೋಷಣೆಯ ವಿರುದ್ಧ ಮಹಿಳೆಯರು ಪ್ರತಿಭಟಿಸುವಂತಾಗಬೇಕು ಎಂದು ಡಾ.ಎಚ್.ಎಸ್.ಅನುಪಮಾ ತಿಳಿದರು.

ಭ್ರಮರಾಂಬ ಸಹಕಾರಿ ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ, ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಸಿಇಒ ವೀರೇಶ ಹಿರೇಮಠ, ಮಹಾಂತೇಶ ಮಸ್ಕಿ, ಸೆಲ್ಕೋ ಸೋಲಾರ್‌ನ ಯಲ್ಲಾಲಿಂಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net