

ಚಿತ್ರದುರ್ಗ: ನಗರದ ಹಿಂದು ಮಹಾಗಣಪತಿ ಶೋಭಾಯಾತ್ರೆಗೆ ಡಿಜೆ ಬಳಕೆಗೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಸೆ.13 ರಂದು ಶೋಭಾಯಾತ್ರೆ ನಡೆಯಲಿದೆ. ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಲು ಜಿಲ್ಲಾಡಳಿತ ಅವಕಾಶ ಕೊಡುವುದಿಲ್ಲ ಎಂದರು.
ಶೋಭಾಯಾತ್ರೆಗೆ ನಾಲ್ಕು ಲಕ್ಷ ಜನ ಸೇರುತ್ತಾರೆ. ಪರ ಜಿಲ್ಲೆಗಳಿಂದಲೂ ಜನರು ಬರುತ್ತಾರೆ. ಗಣೇಶ ಉತ್ಸವ ಸಾಂಸ್ಕೃತಿಕವಾಗಿ ಆಚರಿಸಬೇಕು. ಉತ್ಸವದಲ್ಲಿ ಡೊಳ್ಳು, ಕೋಲಾಟ, ಜನಪದ ಕಲಾ ಪ್ರಕಾರಗಳಿರಲಿ. ಶಬ್ಧ ಮಾಲಿನ್ಯ ಸಲ್ಲದು ಎಂದರು.
ಮಂಡ್ಯ ಜಿಲ್ಲೆ ಮದ್ದೂರು ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ಪಡೆದು ಪ್ರತಿಕ್ರಿಯಿಸುವೆ. ತನಿಖೆ ಬಳಿಕ ಸತ್ಯಾಂಶ ಬಯಲಾಗುತ್ತದೆ ಎಂದರು.
ಸುಮೋಟೊ ಕೇಸ್
9 ಡಿಜೆಗಳೊಂದಿಗೆ ಚಿತ್ರದುರ್ಗ ಹಿಂದು ಮಹಾಗಣಪತಿ ಶೋಭಾಯಾತ್ರೆ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಸುದ್ದಿಗಾರರಿಗೆ ತಿಳಿಸಿದರು.
ಶಿವಮೊಗ್ಗ, ಭದ್ರಾವತಿಯಲ್ಲಿ ನಡೆದ ಶೋಭಾಯಾತ್ರೆಗಳ ವೇಳೆ ಅಲ್ಲಲ್ಲಿ ಸ್ಟಾಂಡಿಂಗ್ ಡಿಜೆಗಳನ್ನು ಇಡಲಾಗಿತ್ತು ಎಂಬ ಮಾಹಿತಿ ಇದೆ. ನಮ್ಮ ನಗರದಲ್ಲಿ ಸೆ.13ರಂದು ನಡೆಯುವ ಶೋಭಾಯಾತ್ರೆಯಲ್ಲಿ 2 ಸ್ಪೀಕರ್‌ಗೆ ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಅತ್ಯಂತ ಹೆಚ್ಚಿನ ಶಬ್ಧ ಹೊರಸೂಸುವ ಡಿಜೆಗಳಿಗೆ ಅವಕಾಶ ಕೊಡದಿರಲು ಜಿಲ್ಲಾಡಳಿತ,ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದರು.
ಈವರೆಗೆ ಒಂದು ಸಾವಿರ ಗಣೇಶ ವಿಸರ್ಜನೆ ಆಗಿದೆ. ಎಲ್ಲೂ ಡಿಜೆಗೆ ಅವಕಾಶ ಕೊಟ್ಟಿಲ್ಲ ಎಂದರು.
ಮೂರು ಸಾವಿರಕ್ಕೂ ಅಧಿಕ ಪೊಲೀಸರು
ಶೋಭಾಯಾತ್ರೆ ಬಂದೋಬಸ್ತ್‌ಗೆ 2100 ಎಚ್‌ಸಿ, ಪಿಸಿ, 16 ಕೆಎಸ್‌ಆರ್‌ಪಿ, 14 ಡಿಎಆರ್, 4 ಕ್ಯೂಆರ್‌ಟಿ ಹಾಗೂ, 180 ಎಎಸ್‌ಐ, 120 ಪಿಎಸ್‌ಐ, 40 ಇನ್ಸ್‌ಪೆಕ್ಟರ್, 15 ಡಿವೈಎಸ್‌ಪಿ ಹಾಗೂ ಆರು ಜನ ಎಎಸ್‌ಪಿಗಳಿರುತ್ತಾರೆ. ಭಾನುವಾರ ರಾತ್ರಿ ನಗರದಲ್ಲಿ ಪೊಲೀಸರು ಬೈಕ್ ರ‌್ಯಾಲಿ ನಡೆಸಿದ್ದಾರೆ. 11 ಅಥವಾ 12ರಂದು ನಗರದಲ್ಲಿ ರೂಟ್‌ಮಾರ್ಚ್ ನಡೆಯಲಿದೆ ಎಂದು ತಿಳಿಸಿದರು.