ಶೋಕಸಾಗರದಲ್ಲಿ ಅಂತಿಮ ಕ್ರಿಯಾವಿಧಿ

13 sbd 1
Published on

ಶಹಾಬಾದ್: ರಾವೂರಿನಲ್ಲಿ ಅಪಾರ ಭಕ್ತರ ಶೋಕ ಸಾಗರದ ಮಧ್ಯೆ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ಅಂತಿಮ ಕ್ರಿಯಾ ವಿಧಿ- ವಿಧಾನಗಳು ಗುರುವಾರ ಜರುಗಿದವು.
ಬಹು ಅಗಾಂಗ ವೈಫಲ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಶ್ರೀಗಳು ಲಿಂಗೈಕ್ಯರಾಗಿದ್ದರು. ಭಕ್ತರ ಒತ್ತಾಯದ ಮೇರೆಗೆ ಆಂಧ್ರ ಪ್ರದೇಶದ ಅದೋನಿಯ ಕಲ್ಮಠದಲ್ಲಿ ಬುಧವಾರ ಮಧ್ಯ ರಾತ್ರಿ 12 ರಿಂದ 2ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಗುರುವಾರ ಬೆಳಗ್ಗೆ 5.30ಕ್ಕೆ ರಾವೂರಿಗೆ ಶ್ರೀಗಳ ಪಾರ್ಥಿವ ಶರೀರ ಆಗಮಿಸಿದ್ದು, ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮಠಕ್ಕೆ ತರಲಾಯಿತು. ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜ್ಯ ಸೇರಿ ಆಂಧ್ರಪ್ರದೇಶ, ತೆಲಂಗಾಣದಿಂದ ಸಹಸ್ರಾರು ಭಕ್ತರು ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3ಕ್ಕೆ ಅಪಾರ ಭಕ್ತರು ಶ್ರೀ ಸಿದ್ಧಲಿಂಗ ಸ್ವಾಮಿಗಳ ಪಾರ್ಥಿವ ಶರೀರವನ್ನು ವೇದಿಕೆಯಿಂದ ಮೆರವಣಿಗೆ ಮೂಲಕ ಕ್ರಿಯಾ ವಿಧಿ ನಡೆಯುವ ಸ್ಥಳಕ್ಕೆ ತಂದರು. ನಂತರ ಪಾರ್ಥಿವ ಶರೀರವನ್ನು ಶುದ್ಧಗೊಳಿಸಲಾಯಿತು. ಮುಗುಳನಾಗಾಂವ್ದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವ ಹಾಗೂ ಕರಿಬಸಯ್ಯ ಶಾಸ್ತ್ರಿ, ಶರಣಬಸಪ್ಪ, ಜಯಂತ ಕೋಳಕೂರ ವೈದಿಕತ್ವದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ- ವಿಧಾನ ಜರುಗಿತು.ಗ್ರಾಮದ ಪ್ರಮುಖರಾದ ಗುಂಡಣ್ಣಬಾಳಿ, ಶರಬಣ್ಣ ದಂಡೋತಿ, ಸಿದ್ರಾಮಪ್ಪ ದೇಸಾಯಿ. ಬಿ.ಎಸ್. ರಾವೂರ ಶರಣು ಜ್ಯೋತಿ, ಸಿದ್ದಲಿಂಗ ಬಾಳಿ, ಶಿವಲಿಂಗಪ್ಪ ವಾಡೇದ್, ಚನ್ನಣ್ಣಬಾಳಿ ಇತರರಿದ್ದರು.

ಅಂತಿಮ ದರ್ಶನ ಪಡೆದ ಗಣ್ಯರುಡಂಬಳದ ಜಗದ್ಗುರು ಶ್ರೀ ಡಾ.ತೋಂಟದ ಸಿದ್ದರಾಮ ಶಿವಯೋಗಿ, ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀ ತೋಟೇಂದ್ರ ಶಿವಾಚಾರ್ಯರು, ಅಬ್ಬೆತೂಮಕೂರಿನ ಶ್ರೀ ಗಂಗಾಧರ ಶಿವಾಚಾರ್ಯರು, ಹಲಕಟರ್ಿಯ ಶ್ರೀ ಮುನೀಂದ್ರ ಶಿವಾಚಾರ್ಯರು, ಚಿತ್ತಾಪುರದ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಮಾಲಗತ್ತಿಯ ಶ್ರೀ ಚನ್ನಬಸವ ಶರಣರು, ಶ್ರೀಶೈಲ ಸಾರಂಗ ಮಠದ ಶ್ರೀ ಸಾರಂಗದರ ದೇಶಿಕೇಂದ್ರ ಜಗದ್ಗುರು, ಭರತನೂರ ಶ್ರೀ, ಸೇಡಂ ಶ್ರೀ, ಹೊನಗುಂಟಾ ಶ್ರೀ, ಪಾಳಾ ಶ್ರೀ, ತೋನಸನಹಳ್ಳಿ ಶ್ರೀ, ಅಕ್ಕಲಕೋಟ ಶ್ರೀ, ಸೊನ್ನ ಶ್ರೀ, ಬಬಲಾದ ಶ್ರೀ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ್ ಹೆಬ್ಬಾಳ, ವಾಲ್ಮೀಕಿ ನಾಯಕ, ಮುಖಂಡರಾದ ಶ್ರೀನಿವಾಸ ಸಗರ, ಅಜೀಜ್ ಸೇಠ್, ವೀರನಗೌಡ ಪರಸರೆಡ್ಡಿ, ನಾಗರೆಡ್ಡಿ ಪಾಟೀಲ್ ಕರದಾಳ, ಸೋಮಶೇಖರ ಪಾಟೀಲ್ ಬೆಳಗುಂಪಾ, ಅಶೋಕ ಸಗರ, ಅಣವೀರ ಇಂಗಿನಶೆಟ್ಟಿ ಇತರರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು.

ಬಾಳಿ ಹೆಗಲಿಗೆ ಶ್ರೀಮಠ ಜವಾಬ್ದಾರಿ
ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡುವವರೆಗೂ ಶ್ರೀಮಠದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕು ಎಂದು ಮುಖಂಡ ಚನ್ನಣ್ಣ ಬಾಳಿ ಅವರಿಗೆ ಗದಗ, ಡಂಬಳ ಮಠದ ಜಗದ್ಗುರು ಶ್ರೀ ಡಾ. ತೋಂಟದ ಸಿದ್ಧರಾಮ ಶಿವಯೋಗಿಗಳು ಆದೇಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net