

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಅಂಗವಾಗಿ ಮೊದಲ ದಿನವಾದ ಗುರುವಾರ ಶೈಲಪುತ್ರಿ ದೇವಿಯ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಾರ್ಥನೆ ಸಲ್ಲಿಸಲಾಯಿತು.
ದೇಗುಲಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೇವಿ ಪಾರಾಯಣ, ಲಲಿತಾ ಸಹಸ್ರನಾಮ, ಭಜನೆ ಸೇರಿ ದೇವಿಗೆ ಶ್ರದ್ಧಾ-ಭಕ್ತಿ ಸಮರ್ಪಿಸಲಾಯಿತು.
ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರ ಪೊಲೀಸ್‌ಠಾಣೆ ಆವರಣದ ಮತ್ತು ಕುಂಚಿಗನಾಳ್ ಕಣಿವೆ ಮಾರಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಾಳಿಕಮಠೇಶ್ವರಿ, ಚಾಮುಂಡೇಶ್ವರಿ, ಮೆದೇಹಳ್ಳಿಯ ಕೊಲ್ಲಾಪುರದಮ್ಮ ಸೇರಿ ಶಕ್ತಿದೇವತೆ ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳಿಗೆ ವಿವಿಧ ಪುಷ್ಪ, ಎಲೆ, ಧಾನ್ಯ ಸೇರಿ ಇನ್ನಿತರೆ ವಸ್ತುಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು.
ಮುಖ ಪದ್ಮ ಲೋಕಾರ್ಪಣೆ: ದಸರಾ ಆಚರಣೆ ಹಿನ್ನೆಲೆಯಲ್ಲಿ ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಯ ನೂತನ ಬೆಳ್ಳಿ ಮುಖ ಪದ್ಮ ಗುರುವಾರ ಲೋಕಾರ್ಪಣೆಗೊಂಡಿತು. ದೇವಿ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಜಿಲ್ಲಾದ್ಯಂತ ಇರುವ ನೂರಾರು ಬನ್ನಿ ಮರಗಳತ್ತ ಸೂರ್ಯೋದಯಕ್ಕೂ ಮುನ್ನವೇ ತೆರಳಿದ ಸಾವಿರಾರು ಮಹಿಳೆಯರು ಬನ್ನಿ ಮಹಾಕಾಳಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಣ್ಣು, ಕಾಯಿ, ಹೂವು, ಎಡೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಅ. 4ರಂದು ಬ್ರಹ್ಮಚಾರಿಣಿ ಪೂಜೆ ಜರುಗಲಿದೆ.