

ಮೈಸೂರು: ಶೈಕ್ಷ್ಷಣಿಕ ಗುಣಮಟ್ಟದ ವೃದ್ಧಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಕಾರ್ಯಕರ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ವರ್ಷದಿಂದ ವರ್ಷಕ್ಕೆ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಪಾಲಕರು, ಶಿಕ್ಷಕರು ಹಾಗೂ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ಗುಣಮಟ್ಟ ಕುಸಿಯಲು ಅನೇಕ ಅಂಶಗಳು ಕಾರಣವಾಗಿವೆ.
ಗುಣಮಟ್ಟದ ಬೋಧನೆ, ಕಲಿಕೆಗೆ ಪೂರಕ ವಾತಾವರಣ ಮತ್ತು ವೈಜ್ಞಾನಿಕ ಮೌಲ್ಯಮಾಪನ ವ್ಯವಸ್ಥೆ ಈ ಮೂರು ಅಂಶಗಳು ಶಿಕ್ಷಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕಡ್ಡಾಯ ತೇರ್ಗಡೆ ನೀತಿಯನ್ನು ಕೈ ಬಿಟ್ಟು 1ನೇ ತರಗತಿಯಿಂದಲೇ ಪಾಸ್ ಮತ್ತು ಫೇಲ್ ಪದ್ಧತಿ ಜಾರಿಗೊಳಿಸಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 70,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು.
ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಶೌಚಗೃಹ, ಕುಡಿಯುವ ನೀರು ಸೇರಿದಂತೆ ಸಮರ್ಪಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹೇಮಾ, ಅಂಜಲಿ, ದಿಶಾ ಇದ್ದರು