ಶೈಕ್ಷಣಿಕವಾಗಿ ಹಿಂದುಳಿದಿರುವ ತಿಗಳ ಸಮುದಾಯ

9
Published on

ಮೈಸೂರು: ತಿಗಳ ಸಮುದಾಯದವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಬಾಸುದೇವ ಸೋಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ರಮೇಶ್ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಕೋಲಾರಗಳಲ್ಲಿ ಹೆಚ್ಚಾಗಿ ಕಂಡು ಬರುವ ತಿಗಳ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ಪುರಾಣದಲ್ಲಿ ನಂಬಿರುವಂತೆ ಸತ್ಯಯುಗದಲ್ಲಿ ಇದ್ದರೆಂದು ನಂಬಲಾಗಿದ್ದ ಅಗ್ನಿ ಬನ್ನಿರಾಯ ಸ್ವಾಮಿಯ ಜನನದ ಉದ್ದೇಶವೇ ಭೂಮಿ, ಸ್ತ್ರೀ ಹಾಗೂ ಗೋವುಗಳನ್ನು ರಕ್ಷಣೆ ಮಾಡುವುದಾಗಿತ್ತು ಎಂದರು.

ಪ್ರಥಮ ಬಾರಿಗೆ ಬನ್ನಿರಾಯ ಸ್ವಾಮಿ ಜಯಂತಿಯನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷ ತಂದಿದೆ. 18 ಪುರಾಣಗಳ ಪೈಕಿ 9 ಪುರಾಣಗಳಲ್ಲಿ ಬನ್ನಿರಾಯಸ್ವಾಮಿಯವರ ಬಗ್ಗೆ ಉಲ್ಲೇಖವಿದೆ. ದೇವಲೋಕದಲ್ಲಿ ವಾತಾಪಿ ಎಂಬ ರಾಕ್ಷಸನ ಅಟ್ಟಹಾಸದಿಂದ ಕಂಗೆಟ್ಟ ದೇವತೆಗಳು ಶಿವನ ಮೊರೆ ಹೋದರು. ಶಿವನ ಆ ತ್ರಿನೇತ್ರದಿಂದ ಹೊರಹೊಮ್ಮಿದ ಒಂದು ಹನಿಯು ಋಷಿಮುನಿಗಳು ಆಚರಿಸುತ್ತಿದ್ದ ಯಾಗದ ಕುಂಡದಲ್ಲಿ ಬಿದ್ದು, ಆ ಕುಂಡದಿದ ಅಗ್ನಿ ಬನ್ನಿರಾಯ ಸ್ವಾಮಿ ಉದಯಿಸಿದನೆಂದು ನಂಬಿಕೆಯಿದೆ ಎಂದು ವಿವರಿಸಿದರು.

ಕ್ಷತ್ರಿಯ ಕುಲದವರು ಪರಾಕ್ರಮಿಗಳು ಹಾಗೂ ಧೈರ್ಯವಂತರು. ಇತಿಹಾಸ ಪುಟಗಳಲ್ಲಿ ಕ್ಷತ್ರಿಯ ವರ್ಗ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸಿದೆ. ನಾಡಿಗಾಗಿ ರಾಜ ಮಹಾರಾಜರು ಬಲಿದಾನವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇತಿಹಾಸ ತಿಳಿದುಕೊಳ್ಳಬೇಕು. ರಾಜ್ಯವನ್ನು ಆಳುವ ಹಾಗೂ ಕಾಯುವ ವರ್ಗವೇ ಕ್ಷತ್ರಿಯ ವರ್ಗವಾಗಿದೆ ಎಂದರು.

ಹೈದರಾಲಿಯು ಒಂದು ಸುಂದರವಾದ ತೋಟ ನಿರ್ಮಿಸಬೇಕೆಂಬ ಕನಸು ಕಂಡಿದ್ದನು. ಹೀಗಾಗಿ ತಮಿಳುನಾಡಿನ ಅರ್ಕಾಟ್ ಪ್ರದೇಶಕ್ಕೆ ತೆರಳಿ ಸುಂದರವಾದ ತೋಟಗಳನ್ನು ನಿರ್ಮಿಸುವುದರಲ್ಲಿ ಕುಶಲತೆ ಹೊಂದಿದ್ದ ತಿಗಳ ಸಮುದಾಯದವರನ್ನು ಭೇಟಿ ಮಾಡಿ ಅವರನ್ನು ಕರ್ನಾಟಕಕ್ಕೆ ಕರೆ ತಂದು ಬೆಂಗಳೂರಿನಲ್ಲಿ 60 ಎಕರೆಗೆ ಒಳಪಟ್ಟ ಹೂವಿನ ತೋಟ ನಿರ್ಮಿಸುವಂತೆ ಹೇಳಿದನು. ಹೈದರ್‌ನ ಮಾತಿನಂತೆ ಬೆಂಗಳೂರಿನಲ್ಲಿ ಒಂದು ತೋಟ ನಿರ್ಮಿಸಲಾಯಿತು. ಈ ಸಮುದಾಯದವರು ನಿರ್ಮಿಸಿದ ತೋಟವೇ ಲಾಲ್‌ಬಾಗ್ ಆಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಅಗ್ನಿ ಬನ್ನಿರಾಯ ಸ್ವಾಮಿ ತಿಗಳರ ಸಮುದಾಯದ ಮೂಲಪುರುಷ ಎಂದು ನಂಬಲಾಗಿದೆ. ಸರ್ಕಾರದ ಮಟ್ಟದಲ್ಲಿ ಇವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕನ್ನಡ ಹೋರಾಟಗಾರರಾದ ಮೂಗೂರು ನಂಜುಡಸ್ವಾಮಿ, ಮೈಸೂರಿನ ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘ, ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net