

ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದೆ. ಯಾವ ಸಮಾಜದಲ್ಲಿ ಹೆಚ್ಚಿನ ವಿದ್ಯಾವಂತರು ಇರುತ್ತಾರೆ. ಆ ಸಮಾಜ ಪ್ರಗತಿ ಸಾಧಿಸುತ್ತದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಒತ್ತು ನೀಡಬೇಕು ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಸಲಹೆ ನೀಡಿದರು.
ನಗರದ ಮಡಿವಾಳ ಮಾಚೀದೇವರ ದೇವಸ್ಥಾನದಲ್ಲಿ ಮಡಿವಾಳ ಸಮಾಜದಿಂದ ಸೋಮವಾರ ಆಯೋಜಿಸಿದ್ದ ವೀರಗಣಾಚಾರಿ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಮತ್ತು ಶ್ರೀ ಮಾಚಿದೇವರ ತತ್ವ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸ ಕಾರ್ಯಕ್ರಮದಲ್ಲಿ ನಡೆದಿದ್ದು, ಇದು ಇತರರಿಗೆ ಸಾಧನೆಗೆ ಸ್ಪೂರ್ತಿ ಆಗುತ್ತದೆ. ಸಮಾಜದ ಪ್ರಗತಿಗೆ ಸದಾ ತಮ್ಮ ಸಹಕಾರ ಇರಲಿದೆ ಎಂದರು.
ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಖಡ್ಗ ಹಿಡಿದು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಶ್ರೇಯಸ್ಸು ವೀರ ಗಣಾಚಾರಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಬೇಕು. ಶರಣು ಬೇಕು. ಆದರೆ ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಮಡಿವಾಳ ಮಾಚೀದೇವರ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಎಲ್ಲರೂ ಬರಬಾರದೇ ಎಂದು ಪ್ರಶ್ನಿಸಿದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನೇತೃತ್ವ ವಹಿಸಿದ್ದ ಬಂದವರ ಓಣಿಯ ಅಕ್ಕಮಹಾದೇವಿ ಗವಿಯ ಪುಜ್ಯ ಸತ್ಯಕ್ಕತಾಯಿ ಅನುಭಾವ ನೀಡಿದರು. ಬೆಂಗಳೂರು ಮಾಚಿದೇವ ಸಮಿತಿಯ ಕಾರ್ಯದರ್ಶಿ ಸಾಯಬಣ್ಣ ಮಡಿವಾಳ, ಜಿಲ್ಲಾ ಮಡಿವಾಳ ಸಮಾಜದ ಗೌರವಾಧ್ಯಕ್ಷ ದಿಗಂಬರ ಮಡಿವಾಳ, ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ ಮಾತನಾಡಿದರು.
ಸೇಡಂ ತಾಲೂಕಿನ ಶ್ರೀ ರಾಮಮಂದಿರ ಬಾಲಪ್ಪ ಸ್ವಾಮಿ ಮಠದ ಶ್ರೀ ಡಾ.ಶ್ರೀನಿವಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಗಣಪತಿ ಸಸ್ತಾಪೂರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ, ಪ್ರಮುಖರಾದ ಶಿವಕುಮಾರ ಬಿರಾದಾರ, ಡಾ.ಖದೀರೋದ್ದಿನ್, ನಿತ್ಯಾನಂದ ಮಂಠಾಳಕರ್, ಜಯದೀಪ ತೆಲಂಗ, ಭಾಲ್ಕಿಯ ದಿಲೀಪ ಮಡಿವಾಳ, ಚಿಡಗುಪ್ಪಾದ ಬಸವರಾಜ ಮಡಿವಾಳ, ಹುಮನಾಬಾದ್‌ನ ದತ್ತು ಕೋಳಾರೆ, ಸಮಾಜದ ತಾಲೂಕು ಉಪಾಧ್ಯಕ್ಷ ವಿಜಯಕುಮಾರ ಮಡಿವಾಳ, ಕಾರ್ಯದರ್ಶಿ ಆಕಾಶ ಮಡಿವಾಳ, ಖಜಾಂಚಿ ಜಗನ್ನಾಥ ಮಡಿವಾಳ, ಸಹ ಕಾರ್ಯದರ್ಶಿ ಶರಣು ಮಡಿವಾಳ, ರಾಜಕುಮಾರ ಮಡಿವಾಳ, ವಿಶ್ವನಾಥ ಮಡಿವಾಳ, ದಶರಥ ಮಡಿವಾಳ, ಸತೀಶ ಮಡಿವಾಳ, ಸಂತೋಷ ಮಂಠಾಳ ಇತರರಿದ್ದರು. ಬಸವರಾಜ ಮಡಿವಾಳ ಸ್ವಾಗತಿಸಿದರು. ಸಂತೋಷ ಮಡಿವಾಳ ಪರ್ತಾಪುರ ನಿರೂಪಣೆ ಮಾಡಿದರು.
ವೈಭವದ ಮೆರವಣಿಗೆ: ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಮಡಿವಾಳ ಮಾಚಿದೇವರ ಹೊಂಡದವರೆಗೆ ವೀರಗಣಾಚಾರಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಯೂ ಸಾಂಸ್ಕೃತಿಕ ವೈಭವದೊಂದಿಗೆ ಜರುಗಿತು. ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಸಮಾಜದ ಪದಾಧಿಕಾರಿಗಳು, ಗಣ್ಯರು, ಭಕ್ತರು ಭಾಗವಹಿಸಿದ್ದರು.
ಸಮಾಜದ ಜನರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ರಾಜಕೀಯ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬಂದಾಗ ಪ್ರಗತಿ ಕಾಣಲು ಸಾಧ್ಯವಿದೆ. ಸರ್ಕಾರದ ಸೌಲಭ್ಯ ಹಾಗೂ ಹಾಗೂ ಎಲ್ಲ ಕ್ಷೇತ್ರದಲ್ಲಿ ಪ್ರತಿನಿಧ್ಯ ಪಡೆಯಬೇಕಾದರೆ ಜಾಗೃತರಾಗಿ ಸಂಘಟಿತರಾಗುವುದು ಅವಶ್ಯಕ.
| ದಿಗಂಬರ ಮಡಿವಾಳ ಗೌರವಾಧ್ಯಕ್ಷ ಜಿಲ್ಲಾ ಮಡಿವಾಳ ಸಮಾಜ