ಶೈಕ್ಷಣಿಕ ಸುಧಾರಣೆ ಗಗನ ಕುಸುಮ

4Ravig5
ಬೆಳಗಾವಿ ಗ್ರಾಮೀಣ ಬಿಇಒ ಕಚೇರಿ.
Published on

ಬೆಳಗಾವಿ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲೂಕಿನ ಶೈಕ್ಷಣಿಕ ವಲಯವಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸುಧಾರಣೆ ಗಗನ ಕುಸುಮವಾಗಿದೆ. ಶಾಲಾವಧಿಯಲ್ಲಿ ಕರ್ತವ್ಯದಲ್ಲಿರದೇ ಸಂಘಟನೆಗೆ ಅಲೆದಾಡುವ ಶಿಕ್ಷಕರು ಹಾಗೂ ಸಿಆರ್‌ಪಿಗಳಿಗೆ ಲಗಾಮು ಹಾಕುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಫಲವಾಗಿದ್ದು,
ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರು ಮಕ್ಕಳ ಶೈಕ್ಷಣಿಕ ಸುಧಾರಣೆ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ.

ಬೆಳಗಾವಿ ಗ್ರಾಮೀಣ ಬಿಇಒ ವ್ಯಾಪ್ತಿಯಲ್ಲಿ 21 ಸರ್ಕಾರಿ ಪ್ರೌಢ ಶಾಲೆ, 58 ಅನುದಾನಿತ ಪ್ರೌಢಶಾಲೆ, 26 ಅನುದಾನ ರಹಿತ ಪ್ರೌಢ ಶಾಲೆ, 283 ಸರ್ಕಾರಿ ಪ್ರಾಥಮಿಕ ಶಾಲೆ, 6 ಅನುದಾನಿತ ಪ್ರಾಥಮಿಕ ಶಾಲೆ ಹಾಗೂ 42 ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಸೇರಿ ಸುಮಾರು ನಾಲ್ಕು ನೂರಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು, ಬಹುದೊಡ್ಡ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಮೇಲಿದೆ.

ಸುಮಾರು 1600 ಶಿಕ್ಷಕರನ್ನು ಒಳಗೊಂಡಿರುವ ಈ ವಲಯ ಕನ್ನಡ, ಮರಾಠಿ, ಉರ್ದು ಮೂರು ಭಾಷಿಕ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಶೈಕ್ಷಣಿಕ ಸ್ಥಿತಿಗತಿ, ಆಡಳಿತಾತ್ಮಕ ತೊಂದರೆ, ಕಾಗದ ಪತ್ರ ವಿಲೇವಾರಿ, ಇಲಾಖೆಯ ವಿವಿಧ ಸುತ್ತೋಲೆಗಳನ್ನು ಕಾರ್ಯರೂಪಕ್ಕೆ ತರುವುದು, ಶಿಕ್ಷಕರ ಸಮಸ್ಯೆ ನಿವಾರಣೆ, ಮಕ್ಕಳ ಬೌದ್ಧಿಕ ಮಟ್ಟದ ಸುಧಾರಣೆ ಉಸ್ತುವಾರಿ,, ಬಿಸಿಯೂಟ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ಮಕ್ಕಳ ಪ್ರವಾಸ ವಿವಿಧ ಕಾರ್ಯಗಳ ಉಸ್ತುವಾರಿ ಸೇರಿ ಹಲವಾರು ಕಾರ್ಯಗಳನ್ನು ಮಾರ್ಗದರ್ಶನದ ಜತೆಗೆ ಇಡೀ ವಲಯವನ್ನೇ ಮುನ್ನಡೆಸುವುದು ಬಿಇಒಗೆ ಸಾಧ್ಯವಾಗುತ್ತಿಲ್ಲ ಎಂಬ ಅಳುಕು ಸ್ವತಃ ಬಿಇಒ ಕಚೇರಿ ಸಿಬ್ಬಂದಿಯಲ್ಲಿದೆ.

ಇದೀಗ ಪರೀಕ್ಷೆಗಳು ಸಮೀಪಿಸುತ್ತಿರುವಾಗ ಅನಾರೋಗ್ಯದ ಕಾರಣದಿಂದ ಬಿಇಒ ದಾಸಪ್ಪನವರ ಜತೆಗೆ ಕಾರ್ಯಾಲಯದ ಇನ್ನೂ ಎರಡ್ಮೂರು ಜನ ಅವರೊಂದಿಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲೆಗಳ ಭೇಟಿಗೆ ಹೊರಟರೆ ಕಚೇರಿ ಕೆಲಸಗಳು ನಿಲ್ಲುತ್ತವೆ.ಮೇಲುಸ್ತುವಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದು ಶಿಕ್ಷಕರ ಕಳಕಳಿಯಾಗಿದ್ದು, ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಿ, ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

ನಿರಂತರ ನಿರ್ಲಕ್ಷೃ

ಮೂವರು ಶಾಸಕರ ವಿಧಾನ ಸಭಾ ಕ್ಷೇತ್ರದ ಪ್ರಾಥಮಿಕ ಹಾಗೂ ಪ್ರೌಢ ಸೇರಿ ಒಟ್ಟು 443 ಶಾಲೆಗಳ ಶೈಕ್ಷಣಿಕ ವಲಯದ ಸಮಸ್ಯೆಗಳಿಗೆ ಆಡಳಿತಾತ್ಮಕ ಪರಿಹಾರ ನೀಡಿ, ಶೈಕ್ಷಣಿಕ ಚಟುವಟಿಕೆಗೆ ಚುರುಕು ಮುಟ್ಟಿಸಬೇಕಿದ್ದ ಸರ್ಕಾರ ಹಾಗೂ ಜನಪ್ರತಿನಿಧಿಗಳು ದಕ್ಷ ಅಧಿಕಾರಿಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಕ್ಕೆ ನಿಯೋಜಿಸಬೇಕು ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಈ ಹಿಂದೆ ಪ್ರಭಾರಿಯಾಗಿ ಬಿಆರ್‌ಸಿ ಎಂ.ಎಸ್.ಮೇದಾರ ಅವರಿಗೆ ಜವಾಬ್ದಾರಿ ನೀಡಿತ್ತು. ಅದಕ್ಕೂ ಮುನ್ನ ರುದ್ರಗೌಡ ಜುಟ್ಟಣವರ ಅವರ ವರ್ಗಾವಣೆಯಿಂದ ತೆರವಾಗಿದ್ದ ಗ್ರಾಮೀಣ ಬಿಇಒ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ನಿಯೋಜಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡುವ ಕೆಲಸದಷ್ಟು ಸಮನ್ವಯಾಧಿಕಾರಿ ಬಿಇಒ ಆಗಿ ಮಾಡುವುದು ಕಷ್ಟಸಾಧ್ಯವಾಗಿ ಶಾಲಾ ಚಟುವಟಿಕಗೆ ಹಿಂದುಳಿದಿತ್ತು. ಈಗಲೂ ಅದೇ ಪರಿಸ್ಥಿತಿ ಎದುರಾಗಿರುವುದು ಸರ್ಕಾರಿ ಶಾಲೆಗಳ ಮಕ್ಕಳ ಪಾಲಕರ ನಿದ್ದೆಗೆಡಿಸಿದೆ.

ಬೆಳಗಾವಿ ಗ್ರಾಮೀಣ ಬಿಇಒ ಕಾರ್ಯಾಲಯಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣಕ್ಕೆ ಹಲವು ಭೌತಿಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಂಡು ಶೈಕ್ಷಣಿಕ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ.| ಸಾದಪ್ಪ ದಾಸಪ್ಪನವರ ಬಿಇಒ, ಬೆಳಗಾವಿ ಗ್ರಾಮೀಣ

| ಶಿವಾನಂದ ಕಲ್ಲೂರ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net