

ಸಾಗರ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿ ಸಮೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವುದಿಲ್ಲ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಕಾರಿಗಳು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರನ್ನು ನೇಮಿಸುವ ಹಾಗೂ ಪೂರ್ಣ ಸಮೀಕ್ಷೆಗೆ 2 ಸಾವಿರ ರೂ. ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ. ನಮಗೆ ಯಾವ ಇಲಾಖೆಯಿಂದಲೂ ಅಕೃತ ಆದೇಶ ಬಂದಿಲ್ಲ. ಗ್ಯಾರಂಟಿ ಯೋಜನೆ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಕೊಡುತ್ತೇವೆ ಎನ್ನಲಾಗಿತ್ತು. ಈವರೆಗೆ ನಯಾಪೈಸೆಯನ್ನೂ ನೀಡಿಲ್ಲ. ಇತರ ಇಲಾಖೆಗಳು ಸಹ ಆಶಾ ಕಾರ್ಯಕರ್ತೆಯರಿಂದ ಅನೇಕ ಕೆಲಸ ಮಾಡಿಸಿಕೊಂಡಿದ್ದು, ಯಾವುದಕ್ಕೂ ಗೌರವಧನ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕೆಲಸಕ್ಕೆ 5 ಸಾವಿರ ರೂ., ನಗರ ಆಶಾ ಕಾರ್ಯಕರ್ತೆಯರಿಗೆ ಮನೆಗಳ ಸಂಖ್ಯೆ ಹೆಚ್ಚು ಇರುವುದರಿಂದ 10 ಸಾವಿರ ರೂ. ಗೌರವಧನ ನೀಡಬೇಕು. ಇಲ್ಲವಾದಲ್ಲಿ ಸಮೀಕ್ಷೆಯಿಂದ ಕೈಬಿಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಿದ್ದ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಗೌರಮ್ಮ, ಶೀಲಾ, ಗೀತಾ, ಶೋಭಾ, ರುಕ್ಮಿಣಿ, ನಾಗರತ್ನಾ, ರುದ್ರಮ್ಮ, ರೇಷ್ಮಾ, ಜ್ಯೋತಿ, ಪೂರ್ಣಿಮಾ, ಪುಷ್ಪಾ ಇತರರಿದ್ದರು.