ಶೈಕ್ಷಣಿಕ ಸಾಧನೆಗೆ ಹೆಚ್ಚಿನ ಓದು ಅತ್ಯಗತ್ಯ

Published on

ಹನೂರು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆಗೈಯಬೇಕಾದರೆ ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ತಿಳಿಸಿದರು.

ತಾಲೂಕಿನ ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಇಕೋ ಕ್ಲಬ್ ಸ್ಥಾಪನೆ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇದು ಯುಗ ಸ್ಪರ್ಧಾತ್ಮಕವಾಗಿದ್ದು, ಉದ್ಯೋಗಕ್ಕೆ ಪೈಪೋಟಿ ಎದುರಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ನಿರಂತರ ಅಧ್ಯಯನಶೀಲರಾಗಬೇಕು. ಇದರಿಂದ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು. ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. ಹಾಗೆಯೇ, ಓದಿನ ಜತೆಗೆ ಕ್ರೀಡೆ ಹಾಗೂ ಸಾಮಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಬಳಿಕ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರೆರೆಯುವುದರ ಮೂಲಕ ಇಕೋಕ್ಲಬ್ ಸ್ಥಾಪಿಸಲಾಯಿತು. ಪ್ರಾಂಶುಪಾಲ ಮುತ್ತುರಾಜು, ಉಪನ್ಯಾಸಕರಾದ ನಾಗರಾಜು, ಸುರೇಂದ್ರನಾಥ್, ನಾಗರಾಜು, ರಾಜೇಶ್, ಮಹೇಂದ್ರ, ಆನಂದ್, ಮಾದೇವಶೆಟ್ಟಿ, ಕೆಂಪರಾಜು, ಪ್ರಶಾಂತ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net