ಶೈಕ್ಷಣಿಕ ಸಮಸ್ಯೆ ಬಗೆಹರಿಸಿ: ಎಬಿವಿಪಿ ಆಗ್ರಹ

ಶೈಕ್ಷಣಿಕ ಸಮಸ್ಯೆ ಬಗೆಹರಿಸಿ: ಎಬಿವಿಪಿ ಆಗ್ರಹ
Published on

ಹಾಸನ: ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯ ಸಮಸ್ಯೆ ಪರಿಹರಿಸಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಎಪಿವಿಪಿಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಹಲವು ವಿವಿಗಳಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕ ವರ್ಗ ಇಲ್ಲದೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವೆಂಬುದು ಮಸುಕಾಗಿದೆ. ರಾಜ್ಯದ 460ಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ ಎಂದು ದೂರಿದರು.
ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯುತ್ತಿಲ್ಲ. ಇದು ಹಲವು ವರ್ಷಗಳ ಜ್ವಲಂತ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕಾಯಂ ಉಪನ್ಯಾಸಕರ ಬದಲು ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗುತ್ತಿತ್ತು. ಆದರೆ ಅತಿಥಿ ಉಪನ್ಯಾಸಕರ ನೇಮಕದಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿ ಶುರುವಾಗಿ 50 ದಿನ ಕಳೆದ ನಂತರ ನೇಮಕಾತಿ ಮಾಡಿರುವುದು ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ ಎಂದು ಅಸಮಾಧಾನ ಹೊರ ಹಾಕಿದರು.
ವಿದ್ಯಾರ್ಥಿಗಳ ಸಮಯ ಹಾಗೂ ತರಗತಿಗಳ ನಷ್ಟಕ್ಕೆ ಹೊಣೆ ಯಾರು, ಆದ್ದರಿಂದ ಸರ್ಕಾರ ಕಾಯಂ ಉಪನ್ಯಾಸಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು. ತಂತ್ರಾಂಶ ಬಳಕೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಮನ್ವಯದ ಜೊತೆಗೆ ತಾಂತ್ರಿಕ ಪರಿಣಿತರ ಕೊರತೆಯಿಂದಾಗಿ ತಂತ್ರಾಂಶದ ಸುಲಭ ಬಳಕೆ ಅಸಾಧ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಹೊಣೆಗಾರಿಕೆಯಿಂದ ನುಣಚಿಕೊಳ್ಳದೆ ಜವಾಬ್ದಾರಿಯುತವಾಗಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು ಎಂದರು.
ಪದವಿ, ಸ್ನಾತಕೋತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು, ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕಾಯಂ ಉಪನ್ಯಾಸಕರ ನೇಮಕ, ಶೈಕ್ಷಣಿಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತನ್ನ ಬದ್ಧತೆ ಖಚಿತಪಡಿಸಬೇಕು ಎಂದರು. ಎಷ್ಟೋ ವಿವಿಗಳಲ್ಲಿ ಉಪನ್ಯಾಸಕರ ಕೊರತೆ ಅಷ್ಟೇ ಅಲ್ಲದೆ ಅನುದಾನ, ಮೂಲಭೂತ ಸೌಕರ್ಯ ಸಮಸ್ಯೆ, ಪೀಠೋಪಕರಣ ಕೊರತೆ, ಪ್ರಾಯೋಗಿಕ ಉಪಕರಣಗಳ ಕೊರತೆ ಇವೆ. ಇವನ್ನು ಸರಿಪಡಿಸದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ವಿಭಾಗ ವಿದ್ಯಾರ್ಥಿ ಪ್ರಮುಖ್, ಜಿಲ್ಲಾ ವಿಸ್ತಾರಕ್ ಸುಶ್ಮಿತಾ, ಕಾರ್ಯಕರ್ತ ದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net